ಅಹಮದಾಬಾದ್,ಜೂ.೧೬:ಗುಜರಾತ್ ರಾಜ್ಯದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿರುವ ವಿನಾಶಕಾರಿ ಬಿಪರ್‌ಜಾಯ್ ಚಂಡಮಾರುತ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಚಂಡಮಾರುತದ ಅಬ್ಬರಕ್ಕೆ ಇಬ್ಬರು ಸಾವನ್ನಪ್ಪಿದ್ದು, ೨೨ ಮಂದಿ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದು, ೯೦೦ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ.
ಇಂದು ಮಧ್ಯರಾತ್ರಿವರೆಗೂ ಚಂಡಮಾರುತದ ತೀವ್ರತೆ ಇರಲಿದ್ದು, ೬೦ ರಿಂದ ೮೦ ಕಿಮೀ ವೇಗದಲ್ಲಿ ಪ್ರಬಲ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಗಾಳಿ ಕ್ರಮೇಣ ೧೨೫ ಕಿ.ಮೀ.ನಿಂದ ೧೪೦ ಕಿ.ಮೀ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಗಾಳಿಯ ತೀವ್ರತೆ ಹೆಚ್ಚಾಗಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಮುನ್ನೆಚ್ಚೆರಿಕೆ ಕ್ರಮವಾಗಿ ರಾಜ್ಯಸರ್ಕಾರ ಲಕ್ಷಾಂತರ ಜನರನ್ನು ತೆರವುಗೊಳಿಸಿದೆ ಎಂದು ಗೃಹಖಾತೆಯ ರಾಜ್ಯ ಸಚಿವ ಹರ್ಷಸಂಘ್ವಿ ತಿಳಿಸಿದ್ದಾರೆ.
ಚಂಡಮಾರುತ ಅಪ್ಪಳಿಸಿದ್ದರಿಂದ ಭಾರಿ ಬಿರುಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಬಿದ್ದಿವೆ. ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ, ಬೆಳೆಗಳು ನಾಶವಾಗಿವೆ. ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ವೇಳೆ ತಂದೆ-ಮಗಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ೨೫ ಮಂದಿ ಗಾಯಗೊಂಡಿದ್ದಾರೆ.
ಭಾವನಾ ನಗರ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜಮೀನಿನ ಬಳಿ ಹಾದುಹೋಗುವ ಕಾಲುವೆ ಉಕ್ಕಿ ಹರಿಯುತ್ತಿತ್ತು, ಕಾಲುವೆಯಲ್ಲಿ ಹಸು ಮತ್ತು ಕುರಿಗಳು ಸಿಕ್ಕಿ ಹಾಕಿಕೊಂಡಿದ್ದವರು. ಅದನ್ನು ಗಮನಿಸಿದ ತಂದೆ-ಮಗ ರಕ್ಷಿಸಲು ಧಾವಿಸಿ ಕಾಲುವೆಗೆ ಹಾರಿದ್ದಾರೆ. ಆದರೆ ನೀರಿನ ರಭಸಕ್ಕೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
೨೨ ಕುರಿ, ಮೇಕೆಗಳು ಸಾವನ್ನಪ್ಪಿವೆ. ಬಿಪರ್‌ಜಾಯ್ ಚಂಡಮಾರುತದ ರೌದ್ರಾವತಾರಕ್ಕೆ ಭಾವನಾ ನಗರ ಜಿಲ್ಲೆಯಲ್ಲಿ ಮನೆಗಳ ಶೀಟ್‌ಗಳ ಛಾವಣಿಗಳು ಹಾರಿಹೋಗಿವೆ. ಮರಗಳು ಉರುಳಿ ಬಿದ್ದಿವೆ. ಕೆಲವು ಮನೆಗಳಿಗೆ ಹಾನಿಯಾಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಅನಾಹುತ ಸೃಷ್ಟಿಯಾಗಿದೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ನೌಕಾಪಡೆ, ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಪಡೆಯ ೧೨ ತಂಡಗಳು, ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ.ಚಂಡಮಾರುತದಿಂದ ಹಾನಿಗೀಡಾಗಿರುವ ಆಸ್ತಿ-ಪಾಸ್ತಿಗಳ ಮಾಹಿತಿ ಇನ್ನು ನಿಖರವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಅಂದಾಜು ಮಾಡಿದ ನಂತರ ನಿಖರ ಮಾಹಿತಿಗಳು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.ಚಂಡಮಾರುತದ ಭೀತಿಯಿಂದಾಗಿ ಮೀನುಗಾರಿಕೆ ಚಟುವಟಿಕೆ ನಾಳೆವರೆಗೆ ಸ್ಥಗಿತಗೊಳಿಸಲಾಗಿದೆ. ಗುಜರಾತ್‌ನ ಪ್ರಸಿದ್ಧ ಯಾತ್ರಾಸ್ಥಳವಾದ ದ್ವಾರಕಾಡಿಶ್ ಹಾಗೂ ಸೋಮನಾಥ ದೇವಾಲಯಗಳನ್ನು ಮುಚ್ಚಲಾಗಿದೆ. ಜಾಮ್ ನಗರದ ವಿಮಾನನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಇಂದೂ ಕೂಡ ಸ್ಥಗಿತಗೊಳಿಸಲಾಗಿದೆ.
ರಾಜಸ್ತಾನದತ್ತ ಬಿಪರ್‌ಜಾಯ್
ಗುಜರಾತ್‌ನ ಕರಾವಳಿ ತೀರಕ್ಕೆ ಅಪ್ಪಳಿಸಿದ ಚಂಡಮಾರುತ ಈಗ ದುರ್ಬಲಗೊಂಡಿದ್ದು, ಸಂಜೆಯ ವೇಳೆಗೆ ದಕ್ಷಿಣ ರಾಜಸ್ತಾನ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಜೋಧ್‌ಪುರ ವಿವಿ ಇಂದು ಮತ್ತು ನಾಳೆ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಿದೆ. ಬಾರ್‌ಮಿರ್-ಜೋಧ್‌ಪುರ ನಡುವೆ ಸಂಚರಿಸಬೇಕಿದ್ದ ರೈಲನ್ನು ೨ ದಿನ ರದ್ದುಪಡಿಸಲಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಘಗಳಿಗೆ ತಎರಳುವಂತೆ ಸೂಚನೆ ನೀಡಿದೆ. ಈಗಾಗಲೇ ಜೈಸ್ಮಲೇರ್‌ನ ಡಬ್ಲಾ ಗ್ರಾಮದಿಂದ ೪೫೦ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಬಾರ್‌ಮಿರ್, ಜಲೋರ್, ಜೈಸ್ಮಲೇರ್ ಪ್ರದೇಶಗಳಲ್ಲಿ ಪ್ರಬಲ ಗಾಳಿ ಬೀಸುತ್ತಿದ್ದು, ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.