ಬಿದರಕಟ್ಟೆ ಕ್ಯಾಂಪಸ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ತುಮಕೂರು, ಆ. ೨- ರಾಜಕೀಯ ಕಾರಣಗಳು ಏನೇ ಇದ್ದರೂ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪಕ್ಷ ಭೇದವಿಲ್ಲದೆ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವುದಾಗಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿದರಕಟ್ಟೆ ಕಾವಲ್, ಊರ್ಡಿಗೆರೆ ಹಾಗೂ ಡಿ.ಎಸ್.ಪಾಳ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಪೂರ್ಣಗೊಂಡು, ಇಲ್ಲಿಂದಲೇ ಚಟುವಟಿಕೆಗಳು ಪ್ರಾರಂಭವಾದರೆ ಈ ಭಾಗ ಅಭಿವೃದ್ಧಿಯಾಗುವುದರ ಜತೆಗೆ ಉದ್ಯೋಗ ಸೃಷ್ಠಿಗೂ ಸಹಕಾರಿಯಾಗಲಿದೆ ಎಂದರು.
ಯಾವುದೇ ವಿಶ್ವವಿದ್ಯಾಲಯಗಳಿಗೆ ಕಡಿಮೆಯಿಲ್ಲದಂತೆ ಸುಮಾರು ೮.೪೦ ಕೋಟಿ ರೂ.ವೆಚ್ಚದಲ್ಲಿ ಕಲಾಭವನ, ವಿಜ್ಞಾನ ಕೇಂದ್ರ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ವಿಶ್ವವಿದ್ಯಾಲಯದ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುವಂತೆ ಸೂಚಿಸಿದರು.
ರಸ್ತೆ ಆಧುನೀಕರಣಕ್ಕೆ ಚಾಲನೆ
ನಾಗವಲ್ಲಿ-ಶಿವಗಂಗೆ ರಸ್ತೆ ಕಾಮಗಾರಿ ೧.೬೦ ಕೋಟಿ ರೂ. ವೆಚ್ಚದಲ್ಲಿ ರಸ್ತೆಯಲ್ಲಿ ಸೈನ್‌ಬೋರ್ಡ್, ಸುರಕ್ಷಾ ಸಾಮಗ್ರಿಗಳನ್ನು ಹಾಗೂ ನಾಮಫಲಕಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದಾಗಿ, ನೆನೆಗುದಿಗೆ ಬಿದ್ದಿದ್ದ ಅನೇಕ ರಸ್ತೆ ಕಾಮಗಾರಿಗಳನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಅನುದಾನ ನೀಡಿದ್ದರಿಂದಲೇ ಇಂದಿಗೂ ಯಾವುದೇ ಕಾಮಗಾರಿಗೂ ಅನುದಾನದ ಕೊರತೆ ಉಂಟಾಗಿಲ್ಲ. ಗ್ರಾಮಾಂತರ ಕ್ಷೇತ್ರಕ್ಕೆ ಅನುದಾನ ನೀಡುವ ವಿಚಾರದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಶಾಲಾ ಕಟ್ಟಡ ನಿರ್ಮಾಣ
ಊರ್ಡಿಗೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ೫೯ ಲಕ್ಷ ರೂ. ವೆಚ್ಚದ ಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳ ಕಾರ್ಯಕ್ರಮಗಳನ್ನು ಮಾಡಲಾಯಿತು. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸರ್ಕಾರಿ ಶಾಲೆಯ ಕಟ್ಟಡಗಳು ನಿರ್ಮಾಣವಾಗಬೇಕು ಎಂದರು.
ಹೆಬ್ಬೂರು ಹೋಬಳಿ ಡಿ.ಎಸ್.ಪಾಳ್ಯದಲ್ಲಿ ಹೇಮಾವತಿ ನಾಲಾವಲಯದಿಂದ ೫೦ ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಸೇತುವೆ ನಿರ್ಮಾಣದಿಂದ ಈ ಭಾಗದ ಬಹುದಿನ ಬೇಡಿಕೆ ಈಡೇರಿದಂತೆ ಆಗಿದ್ದು, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಎಇಇ ಹರೀಶ್, ಇಂಜನಿಯರ್ ಮಂಜುನಾಥ್, ಬಿಇಒ ಹನುಮನಾಯ್ಕ್, ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತಕುಮಾರ್, ಬೈರೇಗೌಡ, ಸುವರ್ಣಗಿರಿಕುಮಾರ್, ಮಸ್ಕಲ್ ಮೋಹನ್, ಬಿದರಕಟ್ಟೆ ವಿನೋದ್, ಕೆಇಬಿ ರಾಜಣ್ಣ, ಚಿಕ್ಕಕೊರಟಗೆರೆ ಕೆಂಪಹನುಮಣ್ಣ ಮತ್ತಿತರರು ಉಪಸ್ಥಿತರಿದ್ದರು.