ಬಿತ್ತನೆ ಬೀಜ ಸಂಗ್ರಹಕ್ಕೆ ಸಲಹೆ

ತಿಪಟೂರು, ನ. ೨೧- ತಾಲ್ಲೂಕಿನ ಪ್ರಮುಖ ಬೆಳೆಗಳಾದ ರಾಗಿ, ತೊಗರಿ, ಭತ್ತ ಹಾಗೂ ಹರಳು (ಔಡಲ) ಮಾಗುವ ಹಂತದಿಂದ ಕಟಾವು ಹಂತಗಳಲ್ಲಿದ್ದು, ಉತ್ತಮ ತೆನೆಗಾಗಿ ಸದೃಢ ಬೀಜ ಸಂಗ್ರಹಿಸಲು ಇದು ಸಕಾಲ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಎನ್. ಕೆಂಗೇಗೌಡ ಹೇಳಿದರು.
ತಾಲ್ಲೂಕಿನ ಅಣ್ಣೇಮಲ್ಲೇನಹಳ್ಳಿ ಗ್ರಾಮದ ಚಿಕ್ಕಮ್ಮ ರವರ ತಾಕಿನಲ್ಲಿ ನಡೆಸಿದ ಬೆಳೆ ಸ್ಪರ್ಧೆ ಕಟಾವು ವೀಕ್ಷಿಸಿ ಅವರು ಮಾತನಾಡಿದರು.
ಅಧಿಕ ಇಳುವರಿ ತಳಿಗಳನ್ನು ಬಿತ್ತನೆ ಮಾಡಿರುವ ರೈತರು ಅದೇ ಬಿತ್ತನೆ ಬೀಜವನ್ನು ೨ ರಿಂದ ೩ ವರ್ಷ ಬಿತ್ತನೆಗೆ ಬಳಸಬಹುದಾಗಿರುತ್ತದೆ. ಆದ್ದರಿಂದ ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಮಾರಾಟಗಾರರಿಂದ ಪಡೆದ ಪ್ರಮಾಣಿತ ಬಿತ್ತನೆ ಬೀಜವನ್ನು ಬಿತ್ತನೆಗೆ ಬಳಸಿರುವ ತಾಕುಗಳಿಂದ ಸದೃಢವಾದ, ರೋಗ ರಹಿತ ಉತ್ತಮ ತೆನೆಗಳನ್ನು ಆಯ್ದು, ಪ್ರತೇಕವಾಗಿ ಒಣಗಿಸಿ ಹಂಗಾಮಿನ ಬಿತ್ತನೆಗೆ ಉಪಯೋಗಿಸಲು ಶೇಖರಿಸಬೇಕು ಎಂದು ಸಲಹೆ ನೀಡಿದರು.
ಬಿತ್ತನೆ ಸಂದರ್ಭದಲ್ಲಿ ಬೀಜಕ್ಕಾಗಿ ಅಲೆದಾಡದೆ ಮನೆ ಬೀಜಗಳನ್ನು ಬಳಸಿ ಬೀಜದ ಖರ್ಚು ಉಳಿಸಿ ಉತ್ತಮ ಇಳುವರಿ ಪಡೆಯಬಹುದು. ಅಲ್ಲದೆ ಸರ್ಕಾರದ ನೀತಿ ಅನ್ವಯ ರೈತ ಸಂಪರ್ಕ ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ರೈತರು ಒಮ್ಮೆ ಪಡೆದ ಅಧಿಕ ಇಳುವರಿ ತಳಿಗಳಿಂದ (ಹೈಬ್ರಿಡ್ ಹೊರತು ಪಡಿಸಿ) ಉತ್ತಮ ಬೀಜಗಳನ್ನು ಸಂಗ್ರಹಿಸಿ ಸತತ ೨ ವರ್ಷಗಳವರೆಗೆ ಬಿತ್ತನೆ ಕೈಗೊಳ್ಳಬಹುದು.
ಪ್ರಸಕ್ತ ಸಾಲಿನಲ್ಲಿ ರಿಯಾಯ್ತಿ ದರದಲ್ಲಿ ಬೀಜ ಪಡೆದ ರೈತರಿಗೆ ಮುಂದಿನ ೨ ವರ್ಷ ಸದರಿ ಬಿತ್ತನೆ ಬೀಜವನ್ನು ವಿತರಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ರೈತರು ತಮಗೆ ಅವಶ್ಯಕತೆ ಇರುವ ಉತ್ತಮ ಬೀಜಗಳನ್ನು ಈ ವರ್ಷದಲ್ಲಿ ಬೆಳೆದಿರುವ ಬೆಳೆಗಳಿಂದ ಸಂಗ್ರಹಿಸಿ ಶೇಖರಿಸಿ ಉಪಯೋಗಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮಧುರ, ಸಹಾಯಕ ಕೃಷಿ ಅಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.