ರಾಮದುರ್ಗ,ಜೂ3: ರೈತರಿಗೆ ಸರ್ಕಾರವು ರಿಯಾಯ್ತಿ ದರದಲ್ಲಿ ನೀಡುವ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ವಿತರಣೆ ಮಾಡಬೇಕು. ಕಳಪೆ ಬೀಜಗಳ ವಿತರಣೆಯಾಗಿ ರೈತರು ಸಂಕಷ್ಟ ಎದುರಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಎಚ್ಚರಿಕೆ ನೀಡಿದರು.
ರಾಮದುರ್ಗ ತಾಲ್ಲೂಕಿನ ಚಂದರಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿ ಮಾತನಾಡಿ, ತಾಲ್ಲೂಕಿನ ರೈತರಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಕೊರತೆ ಕಂಡು ಬರುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಬೀಜ ಸಂಗ್ರಹಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ದುರ್ಬಳಕೆ, ತಾರತಮ್ಯ ಆಗದಂತೆ ವ್ಯವಸ್ಥೆ ಮಾಡಬೇಕು. ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಲಹೆಗಳನ್ನು ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಬೆನ್ನೆಲುಬಾಗಿರುವ ರೈತ ಕುಲಕ್ಕೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್‍ಸರ್ಕಾರ ಬದ್ಧವಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ರಾಮದುರ್ಗದ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ ಪ್ರಾಸ್ತಾವಿಕ ಮಾತನಾಡಿ, ಚುನಾಯಿತರಾದ ನಂತರ ರೈತರ ಪ್ರಥಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಶಾಸಕ ಅಶೋಕ ಪಟ್ಟಣ ಅವರು ರೈತರ ಪರವಾಗಿ ಕಾಳಜಿ ಹೊಂದಿದ್ದಾರೆ. ಅವರ ಸೂಚನೆಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ರಾಮದುರ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ 500 ಕ್ವಿಂಟಾಲ್‍ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿತ್ತು. ಈಗಾಗಲೇ 350 ಕ್ವಿಂಟಾಲ್‍ಬಿತ್ತನೆ ಬೀಜಗಳ ಸಂಗ್ರಹಣೆಯಾಗಿದೆ. ತಾಲ್ಲೂಕಿನಲ್ಲಿ 93 ಜನ ರಸಗೊಬ್ಬರದ ಮಾರಾಟಗಾರರಿದ್ದಾರೆ. ರಸಗೊಬ್ಬರಗಳ ದಾಸ್ತಾನು ಸಹ ಮಾಡಿಕೊಳ್ಳಲಾಗಿದೆ. ರೈತರಿಗೆ ಯಾವುದೇ ಕೊರತೆಯಾಗದಂತೆ ಜಾಗೃತಿ ವಹಿಸಲಾಗುವುದು ಎಂದು ಹೇಳಿದರು.
ಚಂದರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಅಡಗಿಮನಿ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ರಾಮನಗೌಡ ಪಾಟೀಲ, ಉದಯ ಸೋಮನಟ್ಟಿ, ಸಹಾಯಕ ಕೃಷಿ ಅಧಿಕಾರಿಗಳಾದ ಆರ್.ಎಂ. ಜೇವೂರ, ಎ.ಬಿ. ವಾಲಿಕಾರ ಇತರರು ಇದ್ದರು.