ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ


ಬ್ಯಾಡಗಿ, ಮೇ29 : ಮುಂಗಾರ ಹಂಗಾಮಿಗಾಗಿ ರೈತರಿಗೆ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರದ ದಾಸ್ತಾನು ಮಾಡಲು ಕೃಷಿ ಇಲಾಖೆಯು ಕ್ರಮ ವಹಿಸಿದ್ದು, ರೈತರು ಸರ್ಕಾರದ ರಿಯಾಯ್ತಿ ದರದಲ್ಲಿ ಬೀಜ, ರಸಗೊಬ್ಬರ ಪಡೆದು ಹೆಚ್ಚಿನ ಇಳುವರಿ ಪಡೆಯುವಂತೆ ಜಿಪಂ ಸದಸ್ಯ ಅಬ್ದುಲ್’ಮುನಾಫ್ ಯಲಿಗಾರ ಹೇಳಿದರು.
ಶುಕ್ರವಾರದಂದು ತಾಲೂಕಿನ ಕಾಗಿನೆಲೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರಲ್ಲದೇ, ಯಾವುದೇ ಕಾರಣಕ್ಕೂ ಕಳಪೆ ಬೀಜಗಳ ವಿತರಣೆಯಾಗದಂತೆ ಮುಂಜಾಗ್ರತೆಯನ್ನು ವಹಿಸಬೇಕೆಂದು ಸೂಚಿಸಿದರು.
ಕೃಷಿ ಸಹಾಯಕ ಅಧಿಕಾರಿ ಕೆ.ಬಿ.ಹಿರೇಹಾಳ ಮಾತನಾಡಿ, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರದಲ್ಲಿ ಬೀಜಗಳನ್ನು ವಿತರಿಸಲಾಗುತ್ತಿದೆ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೋವಿನ ಜೋಳ, ಹೆಸರು, ಅಲಸಂದೆ, ಸೂರ್ಯಕಾಂತಿ, ಹೈಬ್ರೀಡ್ ಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದ್ದು, ರೈತರು ಆಧಾರ ಕಾರ್ಡ, ಪಹಣಿ ಪತ್ರಿಕೆ, ಬ್ಯಾಂಕ್ ಪಾಸಬುಕ್ಕುಗಳ ಝರಾಕ್ಸ ಪ್ರತಿಗಳೊಂದಿಗೆ ಬಂದು ಕೋವಿಡ್-19 ನಿಯಮಾವಳಿಗಳ ಪ್ರಕಾರ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಜಗದೀಶ ಪೂಜಾರ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಎಸ್.ಪಿ.ಮರಬಸಣ್ಣನವರ, ಸಿಬ್ಬಂದಿಗಳಾದ ಶರಣಪ್ಪ ಪೂಜಾರ, ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.