ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ:ಜಾಗೃತೆ ವಹಿಸಲು ಅಧಿಕಾರಿಗಳಿಗೆ ಕೃಷಿ ಸಚಿವರ ಕರೆ:

ಬೆಂಗಳೂರು, ಮೇ.30: ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.‌

ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು. ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು. ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಒಗಳು ಹಾಜರಿರಬೇಕು. ಮಣ್ಣು ಪರೀಕ್ಷೆ ವರದಿ ಸೂಕ್ತ ಸಮಯದಲ್ಲಿ ನೀಡಬೇಕು. ಬೆಳೆ ವಿಮೆ ನೀಡುವಲ್ಲಿ ರೈತರಿಗೆ ಸಮಸ್ಯೆ ಆಗಬಾರದು. ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆಯಾದರೂ ಜಂಟಿ ನಿರ್ದೇಶಕರೇ ನೇರ ಹೊಣೆ ಆಗ್ತೀರಾ ಎಂದು ಎಚ್ಚರಿಕೆ ನೀಡಿದ್ದಾರೆ.

2023 ರ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.5.54 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, 7.85 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳು ಲಭ್ಯವಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

2023-24 ಸಾಲಿನ ಮುಂಗಾರು ಹಂಗಾಮಿಗೆ 25.47 ಲಕ್ಷ ಮೆ.ಟನ್ ರಸಗೊಬ್ಬರ ಬೇಡಿಕೆ ಇದೆ. 7.30 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ.
ಪ್ರಸ್ತುತ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ 13.90 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.1.68 ಲಕ್ಷ ಮೆ ಟನ್ ರಸಗೊಬ್ಬರ ಕಾಪು ದಾಸ್ತಾನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಪ್ರಸ್ತುತ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ತೊಗರಿ ಬೆಳೆಗೆ ಪರಿಹಾರ:

2022-23ನೇ ಸಾಲಿನಲ್ಲಿ ನೆಟೆ ರೋಗದಿಂದ ಕಲಬುರಗಿ ಜಿಲ್ಲೆಯಲ್ಲಿ 198488 ಹೆಕ್ಟೇರ್, ಬೀದರ್ ಜಿಲ್ಲೆಯಲ್ಲಿ 14495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20401 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿದ್ದು ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪರಿಹಾರದಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿಗಳ ಅನುದಾನ ಘೋಷಿಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ತಿಳಿಸಿದ್ದಾರೆ.

ಖಾಲಿ ಹುದ್ದೆ ಭರ್ತಿ:

ಕೃಷಿ ಇಲಾಖೆಯಲ್ಲಿ ಶೇ‌.58ರಷ್ಟು ಹುದ್ದೆಗಳು ಖಾಲಿಯಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಲು ವಿಳಂಬ ಆಗಲಿದೆ. ಆ ನಿಟ್ಟಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಅವಶ್ಯವಿದೆ. ಹಾಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೃಷಿ ಇಲಾಖೆಗೆ ಒಟ್ಟು 8982 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 3787 ಹುದ್ದೆಗಳು ಭರ್ತಿಯಾಗಿವೆ. 5195 ಹುದ್ದೆಗಳು ಖಾಲಿ ಇವೆ ಎಂದರು

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.