ಬಿತ್ತನೆ ಬೀಜ ಮತ್ತು ರಸಗೊಬ್ಬರ ಬೆಲೆ ಇಳಿಕೆಗೆ ಸಿರಗಾಪೂರ ಆಗ್ರಹ

ಕಲಬುರಗಿ: ಜೂ.9:ಈಗಾಗಲೇ ಮುಂಗಾರು ಪ್ರಾರಂಭಗೊಂಡಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆ ದುಪ್ಪಟ್ಟು ಆಗಿರುವುದರಿಂದ ರೈತರು ಖರೀದಿ ಮಾಡಲು ತೊಂದರೆ ಅನುಭವಿಸುವಂತಾಗಿದೆ.ಸಬ್ಸಿಡಿ ಕೂಡ ಸಿಗುತ್ತಿಲ್ಲ.ಕೂಡಲೆ ಸರಕಾರ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆ ಇಳಿಕೆ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ವರ್ಷ ಉತ್ತಮ ಮಳೆಯ ಕೊರತೆಯಿಂದ ಬೆಳೆಗಳು ಬಾರದೆ ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.ಈಗ ಏಕಾ ಎಕಿ ದರಗಳು ಹೆಚ್ಚಿಸಿರುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಲು ಸಾಧ್ಯವಿಲ್ಲ.ಅದಲ್ಲದೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಬೀಜ ಹಾಗೂ ರಸಗೊಬ್ಬರಗಳು ದೊರಕುತ್ತಿಲ್ಲ.ರೈತ ಸಂಪರ್ಕ ಕೇಂದ್ರಗಳ ಎದುರು ರೈತರು ದಿನಪೂರ್ತಿ ಸರತಿಯಲ್ಲಿ ನಿಂತರು ಯಾವುದೇ ಪ್ರಯೋಜನವಾಗುತ್ತಿಲ್ಲ.ಸಬ್ಸಿಡಿಗಳಲ್ಲಿ ದೊರಕುವ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಕಳ್ಳರ ಕೈ ಸೇರಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.ಇಷ್ಟಾದರೂ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.ರೈತರ ನೆರವಿಗೆ ಬರುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ದೇಶದ ಬೆನ್ನೆಲುಬು ರೈತರಿಗೆ ಹೊಡೆತಗಳ ಮೇಲೆ ಹೊಡೆತಗಳನ್ನು ಬೀಳುತ್ತಿದ್ದರು ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಬೆಲೆ ಏರಿಕೆ ಮಾಡಿದೆ ?. ಕೂಡಲೇ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆ ಇಳಿಕೆ ಮಾಡಿ ಸಬ್ಸಿಡಿ ದರದಲ್ಲಿ ವಿತರಿಸಬೇಕು.ಬಡ ರೈತರಿಗೆ ಉಚಿತವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.