ಬಿತ್ತನೆ ಬೀಜ ಪೂರೈಕೆಗೆ ಆಗ್ರಹ

ಹುಳಿಯಾರು, ಏ. ೨೭- ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಸಮರ್ಪಕವಾಗಿ ಕೊರತೆಯಾಗದಂತೆ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಕೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದರು.
ಈಗಾಗಲೇ ತಾಲ್ಲೂಕಿನಾದ್ಯಂತ ೨-೩ ಬಾರಿ ಉತ್ತಮ ಮಳೆಯಾಗಿದೆ. ರೈತರೂ ಸಹ ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಇಂದಿನಿಂದ ಭರಣಿ ಮಳೆ ಆರಂಭವಾಗಲಿದ್ದು, ಈ ಮಳೆಗೆ ರೈತರು ಬಿತ್ತನೆ ಕಾರ್ಯ ಆರಂಭಿಸುತ್ತಾರೆ.
ತಾಲ್ಲೂಕಿನಲ್ಲಿ ಈ ಮುಂಗಾರಿಗೆ ತೊಗರಿ, ಹೆಸರು, ಉದ್ದು, ತಟಗಣಿ, ಎಳ್ಳು ಬಿತ್ತಲಾಗುತ್ತದೆ. ಆದರೆ ಕೃಷಿ ಇಲಾಖೆಯಿಂದ ಇಲ್ಲಿಯವರೆವಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜಗಳ ಪೂರೈಕೆಯಾಗಿಲ್ಲ. ಹಾಗಾಗಿ ಕೂಡಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಮಾರಾಟಕ್ಕೆ ಮುಂದಾಗಬೇಕು. ಇಲಾಖೆಯಿಂದ ಬಡ ರೈತರಿಗೆ ನೀಡುವ ಬೀಜದ ಕಿಟ್‌ಗಳನ್ನು ಶೀಘ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ರೈತರ ಸೊಸೈಟಿಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡದ ಹಿನ್ನೆಲೆಯಲ್ಲಿ ರೈತರು ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿಸಿದ್ದರು. ಲಾಕ್‌ಡೌನ್‌ನಲ್ಲಿ ಜೀವನ ಹಂಗು ತೊರೆದು ಮೈಲಿಯುದ್ದ ಕ್ಯೂ ನಿಂತು ರಸಗೊಬ್ಬರ ಕೊಳ್ಳುವಂತಾಗಿತ್ತು. ಈ ವರ್ಷವಾದರೂ ಅಧಿಕಾರಿಗಳು ಎಚ್ಚೆತ್ತು ಸೊಸೈಟಿಗಳಲ್ಲಿ ಗೊಬ್ಬರ ದಾಸ್ತಾನು ಇಡುವಂತೆಯೂ ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ನ್ಯಾಯಯುತ ಬೆಲೆಯಲ್ಲಿ ಗೊಬ್ಬರ ಮಾರುವಂತೆಯೂ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.