ಬೀದರ:ಜೂ.9:ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಗುರುವಾರ ಔರಾದ(ಬಿ) ತಾಲ್ಲೂಕಿನ ವಡಗಾಂವ(ಡಿ) ಗ್ರಾಮ ಪಂಚಾಯತ್ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಯಾವ ಸಂದರ್ಭದಲ್ಲಾದರೂ ಮಳೆಯಾಗಬಹುದು. ರೈತರು ಬಿತ್ತನೆಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತಕ್ಷಣ ಬೀಜ ವಿತರಣೆ ಆರಂಭಿಸಬೇಕು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ ಹಂಚಿಕೆಯಾಗಬೇಕು. ಯಾವೊಬ್ಬ ರೈತರಿಗೂ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗಬಾರದು ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತ ಸಂಪರ್ಕ ಕೇಂದ್ರ ಅಥವಾ ಇಲಾಖೆ ಕಛೇರಿಗೆ ಆಗಮಿಸುವ ರೈತರೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಮ್ಯವಾಗಿ ವರ್ತಿಸಬೇಕು. ವಿನಾಕಾರಣ ಕಾಲಹರಣ ಮಾಡುವುದು, ಅವಾಚ್ಯ ಪದಗಳ ಬಳಕೆ ಮಾಡುವುದು ನಡೆಯಬಾರದು. ರೈತರಿಗೆ ಸಹಕಾರವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕೃಷಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ರೈತರ ಇಳುವರಿ ಹೆಚ್ಚಳವಾಗಿ ಅವರ ಆದಾಯ ವೃದ್ಧಿಸಲು ನೆರವಾಗಬೇಕು. ಕಾಲಕಾಲಕ್ಕೆ ರೈತರಿಗೆ ಅವಶ್ಯಕ ಸಲಹೆಗಳನ್ನು ನೀಡಬೇಕು. ರೈತರು ಕೂಡ ಅಧಿಕಾರಿಗಳ ಕೆಲಸಕ್ಕೆ ಸಹಕರಿಸಬೇಕು. ಅವರ ಸಲಹೆಗಳನ್ನು ಪಾಲಿಸುವ ಮೂಲಕ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತರು ಸೇರಿದಂತೆ ಎಲ್ಲ ಮಹಾಜನತೆಯ ಸಹಕಾರದಿಂದಾಗಿ ನಾನು ನಾಲ್ಕನೇ ಅವಧಿಗೆ ಶಾಸಕನಾಗಿದ್ದೇನೆ. ನಾನು ಸದಾ ರೈತರ ಪರವಾಗಿದ್ದೇನೆ. ಏನೇ ಸಮಸ್ಯೆ ಎದುರಾದರೂ ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ರೈತರ ನೆರವಿಗೆ ದಿನದ 24 ಗಂಟೆಯೂ ಸಿದ್ದನಿದ್ದೇನೆ ಎಂದು ರೈತರಿಗೆ ಭರವಸೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎ.ಕೆ ಅನ್ಸಾರಿ ಪ್ರಾಸ್ತಾವಿಕ ಮಾತನಾಡಿ, ಔರಾದ ಕ್ಷೇತ್ರದಲ್ಲಿ ಸೋಯಾ ಅವರೆ ಪ್ರಮುಖ ಬೆಳೆಯಾಗಿದೆ ನಂತರದ ಸ್ಥಾನವನ್ನು ತೊಗರಿ ಪಡೆದಿದೆ. ಇದರೊಂದಿಗೆ ಉದ್ದು, ಹೆಸರು ಹಾಗೂ ಮತ್ತಿತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಎಲ್ಲ ರೈತರು ಕೇವಲ ಸೋಯಾ ಬೆಳೆ ಬಿತ್ತನೆ ಮಾಡದೇ ಉಳಿದ ದ್ವಿದಳ ಧಾನ್ಯಗಳನ್ನು ಬೆಳೆಸಲು ಮುಂದಾಗಬೇಕು. ಕಡಿಮೆ ಬಳಕೆ ಮತ್ತು ಹೆಚ್ಚು ಇಳುವರಿ ಕೊಡುವ ನ್ಯಾನೋ ಡಿಎಪಿ ಗೊಬ್ಬರವೂ ಲಭ್ಯವಿದ್ದು ರೈತರು ಇದನ್ನೂ ಬಳಕೆ ಮಾಡಬಹುದಾಗಿದೆ ಎಂದು ಸಲಹೆ ಮಾಡಿದರು.
ಇದೇ ವೇಳೆ ಸಾಂಕೇತಿಕವಾಗಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಸಂಜೀವ ಚವ್ಹಾಣ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದ ಕುಲಕರ್ಣಿ, ರೈತ ಸಂಘದ ಶ್ರೀಮಂತ ಬಿರಾದಾರ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ: ಶಾಸಕರಾದ ನಂತರದ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಪ್ರಭು.ಬಿ ಚವ್ಹಾಣ ಅವರನ್ನು ವಡಗಾಂವ(ಡಿ) ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ವೀರಭ್ರೇಶ್ವರ ದೇವಸ್ಥಾನದಿಂದ ಕಾರ್ಯಕ್ರಮದ ವೇದಿಕೆವರೆಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ಗೌರವ ಸಲ್ಲಿಸಿದರು.