ಬಿತ್ತನೆ ಬೀಜ,ರಸಗೊಬ್ಬರ ವಿತರಣೆಯ ಪರಿಶೀಲನೆ

ಧಾರವಾಡ,ಮೇ30:ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ಚುರುಕು ಪಡೆದಿದ್ದು, ಕೃಷಿ ಇಲಾಖೆ ಮೂಲಕ ಜಿಲ್ಲಾಡಳಿತವು ಜಿಲ್ಲೆಯ 28 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಂಡಿದೆ ಮತ್ತು ಖಾಸಗಿ ರಸಗೊಬ್ಬರ ವಿತರಕರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸಚಿವರು ರೈತನೋರ್ವನಿಗೆ ಬಿತ್ತನೆ ಬೀಜ ವಿತರಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಖರೀದಿಗಾಗಿ ಆಗಮಿಸಿದ್ದ ರೈತರೊಂದಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ, ಅನುಕೂಲತೆಗಳ ಕುರಿತು ಸಚಿವರು ಅಭಿಪ್ರಾಯ ಪಡೆದರು. ಈ ಸಂದರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ ಮುನೆನಕೊಪ್ಪ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಉಪವಿಭಾಗಾಧಿಕಾರಿ ಡಾ.ಗೋಪಾಲ ಕೃಷ್ಣ.ಬಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ.ಐ.ಬಿ., ತಾಲೂಕಾ ಕೃಷಿ ಸಹಾಯಕ ನಿರ್ದೇಶಕ ಸಿ.ಜಿ.ಮೇತ್ರಿ, ತಹಶೀಲ್ದಾರ ಸಂತೋಷ ಬಿರಾದಾರ ಸೇರಿದಂತೆ ರೈತರು, ಜನಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.