ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಲು ಸೂಚನೆ

ಚಿತ್ರದುರ್ಗ.ಜೂ.೭; ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ರೈತರು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಕಳಪೆ ಬೀಜ ಮತ್ತು ಗೊಬ್ಬರ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಪ್ರಸಕ್ತ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತು ಕೃಷಿ, ತೋಟಗಾರಿಕೆ, ಬೀಜ ನಿಗಮ, ಎಣ್ಣೆ ಕಾಳು ಅಭಿವೃದ್ಧಿ ನಿಗಮ, ರಸಗೊಬ್ಬರ ಪೂರೈಕೆದಾರರು ಹಾಗೂ ರೈತರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚಿತ್ರದುರ್ಗ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರೈತರಿಗೆ ಸಮಯಕ್ಕೆ ತಕ್ಕಂತೆ ಬೀಜ ಮತ್ತು ಗೊಬ್ಬರ, ಕೀಟನಾಶಕ ಸೇರಿದಂತೆ ಸಾಮಗ್ರಿಗಳು ದೊರಕುವಂತೆ ಮಾಡಬೇಕು ಎಂದರು.