ಬಿತ್ತನೆಗಾಗಿ ಭೂಮಿ ಸಜ್ಜುಗೊಳಿಸುತ್ತಿರುವ ರೈತ

ಲಕ್ಷ್ಮೇಶ್ವರ, ಮೇ20: ತಾಲೂಕಿನಾದ್ಯಂತ ರೈತರು ಮುಂಗಾರಿನ ಕನಸು ಮತ್ತು ಬಿತ್ತನೆಗಾಗಿ ಜಮೀನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಕಳೆದ ಎರಡು ವರ್ಷಗಳಿಂದಲೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಅನ್ನದಾತ ಕೈ ಸುಟ್ಟುಕೊಂಡು ಮತ್ತೆ ಪ್ರಸಕ್ತ ಹಂಗಾಮಿಗಾಗಿ ಭೂಮಿಗಳನ್ನು ಹಸನ ಮಾಡುತ್ತಿದ್ದಾರೆ.
ಒಂದು ವರ್ಷ ಅತಿವೃಷ್ಟಿ ಒಂದು ವರ್ಷ ಅನಾವೃಷ್ಟಿ ಇದು ರೈತನ ಬದುಕಿನ ಒಂದೇ ನಾಣ್ಯದ ಎರಡು ಮುಖಗಳಂತಾಗಿದ್ದು ರೈತರ ಗೋಳು ರಾಜಕೀಯದವರಿಗೆ ಮೊಸಳೆ ಕಣ್ಣೀರು ಸುರಿಸುವ ಅಸ್ತ್ರವಾಗಿದ್ದಾನೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಏಕದಳ ಧಾನ್ಯ ದ್ವಿದಳ ಧಾನ್ಯ ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ ಒಟ್ಟು ತಾಲೂಕಿನಲ್ಲಿ 35, 775 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.
ತಾಲೂಕಿನಲ್ಲಿ ಪ್ರಮುಖವಾಗಿ ರೈತರು ಮುಂಗಾರಿನಲ್ಲಿ ಹೆಸರು ಶೇಂಗಾ ಮತ್ತು ಮೆಕ್ಕೆಜೋಳ ಬೆಳೆಯುವುದು ಸಾಂಪ್ರದಾಯಿಕವಾಗಿದೆ ಅದರಲ್ಲೂ ವಿಶೇಷವಾಗಿ ಎರಡು ವರ್ಷಗಳಿಂದ ರೈತರು ಪದೇಪದೇ ಹೆಸರು ಬೆಳೆಗೆ ಕೀಟ ಮತ್ತು ರೋಗಭಾಧೆಯಿಂದ ಬೆಳೆ ನಾಶವಾಗತೊಡಗಿದ್ದು ಇದರಿಂದಾಗಿ ಬೆಳೆಗಳ ಬದಲಾವಣೆಗಾಗಿ ರೈತರು ಅನಿವಾರ್ಯವಾಗಿ ಮೆಕ್ಕೆಜೋಳ ಹೆಚ್ಚು ಬೆಳೆಯತೊಡಗಿದ್ದಾರೆ.
ಮೂಲಗಳ ಪ್ರಕಾರ ಸಾಲಿನಲ್ಲಿ 9900 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ರೂ.4,000 ಪ್ರದೇಶದಲ್ಲಿ ಹೆಸರು ಮತ್ತು 7900 ಹೆಕ್ಟರ್ ಪ್ರದೇಶದಲ್ಲಿ ಶೇಂಗಾಭಿತ್ತನೆಯ ಗುರಿ ಹೊಂದಲಾಗಿದೆ.
ತಾಲೂಕಿನಲ್ಲಿ 9935 ಹೆಕ್ಟರ್ ಪ್ರದೇಶದಲ್ಲಿ ಏಕದಳ ಧಾನ್ಯ 14075 ಹೆಕ್ಟರ್ ಪ್ರದೇಶದಲ್ಲಿ ದ್ವಿದಳ ಧಾನ್ಯ 8025 ಡಾಕ್ಟರ್ ಪ್ರದೇಶದಲ್ಲಿ ಎಣ್ಣೆ ಕಾಳು 6700 ಹೆಕ್ಟರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.
ಮಾಗಿ ಉಳಿಮೆ ಮಾಡುತ್ತಿದ್ದ ಸೂರಣಗಿ ರೈತ ನಿಂಗಪ್ಪ ಮೇಲ್ಮುರಿಯವರು ಮಾತನಾಡಿ, ನಾವು ಮಾಡೋ ಕೆಲಸಾನ ಮಾಡೋ ತಯಾರಿ ಇಟ್ಕೊಂಡು ಕುಂತಿವೆ ಅಂದ್ರೆ ಬಿತ್ತಾಕ ಅನುಕೂಲ ಆಗ್ತೈತ್ರಿ ಎರಡು ವರ್ಷದಿಂದ ಕೈ ಸುಟ್ಟುಕೊಂಡೇವಿ ಈ ಸಲಾನರ ಮಳೆರಾಯ ಕಣ್ಣ ತೆಗೆದರೆ ನಮ್ಮ ಸಂಕಷ್ಟ ಪರಿಹಾರ ಆಗ್ತಾವ್ರಿ ಎಂದು ಹೇಳಿ ಬೀಜ ಗೊಬ್ಬರ ಖರೀದಿಗಾಗಿ ಮತ್ತು ಸಾಲ ಸೂಲ ಮಾಡೋದು ಅನಿವಾರ್ಯ ಐತ್ರಿ ಎಂದು ಅಳಲನ್ನು ತೋಡಿಕೊಂಡರು.