ಬಿಡೆನ್, ಕಮಲಾಗೆ ಅಭಿನಂದನೆಗಳ ಮಹಾಪೂರ

ವಾಷಿಂಗ್ಟನ್, ನ ೮ – ಅಮೆರಿಕದ ೪೬ನೇ ಅಧ್ಯಕ್ಷರಾಗಲು ಅರ್ಹತೆ ಪಡೆದಿರುವ ಡೆಮಾಕ್ರಾಟಿಕ್ ಪಕ್ಷದ ಜೋಸೆಫ್ ಬೈಡನ್ ಹಾಗೂ ಉಪಾಧ್ಯಕ್ಷರಾಗಲಿರುವ ಕಮಲಾ ಹ್ಯಾರೀಸ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ, ಐರ್ಲೆಂಡ್ ಪ್ರಧಾನಿ ಮೈಕಲ್ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಅನೇಕ ಮುಖಂಡರು ಶುಭ ಹಾರೈಸಿದ್ದಾರೆ.

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ ೭೮ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ ೨೦ ಮತಗಳೊಂದಿಗೆ ಬೈಡೆನ್ ೨೭೩ ಎಲೆಕ್ಟೊರಲ್ ಮತಗಳನ್ನು ಪಡೆಯಲಿದ್ದಾರೆ.