ಬಿಡಿಸಿಸಿ ಬ್ಯಾಂಕ್ ಬ್ಯಾಂಕ್‍ಗೆ 12.31 ಕೋಟಿ ಲಾಭಷೇರುದಾರರಿಗೆ 4% ಲಾಭಾಂಶ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜು23: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕಳೆದ ಆರ್ಥಿಕ ವರ್ಷ 2022-23ರಲ್ಲಿ ಒಟ್ಟು 12.31 ಕೋಟಿ ರೂ. ಗಳ ಲಾಭಗಳಿಸಿದ್ದು ಬ್ಯಾಂಕಿನ ಶೇರುದಾರರಿಗೆ ಶೇ.4ರಷ್ಟು ಲಾಭಾಂಶ ಘೋಷಣೆ ಮಾಡಲಾಗಿದೆ ಎಂದು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೇಳಿದರು.
ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ ನಂತರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2023ರ ಮಾ. 31ಕ್ಕೆ ಇದ್ದಂತೆ ಬ್ಯಾಂಕಿನ ಷೇರು ಬಂಡವಾಳ 125.53 ಕೋಟಿ, ಬ್ಯಾಂಕಿನ ಒಟ್ಟು ದುಡಿಯುವ ಬಂಡಾವಳ 2362.87 ಕೋಟಿ ರೂಗಳಿದ್ದು ಕೃಷಿ ಸಾಲದ ವಸೂಲಾತಿಯಲ್ಲಿ ಶೇ. 93.26ರಷ್ಟು ಹಾಗೂ ಕೃಷಿಯೇತರ ಸಾಲದ ವಸೂಲಾತಿಯಲ್ಲಿ ಶೇ. 96.60 ರಷ್ಟು ಮತ್ತು ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯಲ್ಲಿ ಶೇ. 94.12 ರಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಹೊಸಪೇಟೆಯಲ್ಲಿ 1920ರಲ್ಲಿ ಸ್ಥಾಪನೆಗೊಂಡಿರುವ ಬ್ಯಾಂಕ್ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ 11 ತಾಲೂಕುಗಳ ಕಾರ್ಯವ್ಯಾಪ್ತಿಯಲ್ಲಿ 33 ಶಾಖೆಗಳಲ್ಲಿ 294 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಸತತವಾಗಿ 47 ವರ್ಷಗಳಿಂದ ಲಾಭವನ್ನು ಗಳಿಸುತ್ತಾ ಜಿಲ್ಲೆಯ ಎಲ್ಲಾ ವರ್ಗದ ರೈತರು ಹಾಗೂ ಗ್ರಾಹಕರಿಗೆ ಬ್ಯಾಂಕಿನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ ಎಂದರು.
ಬ್ಯಾಂಕ್ ಗ್ರಾಹಕರಿಗೆ ಸಾಲ ಸೌಲಭ್ಯಗಳೊಂದಿಗೆ  ಜೊತೆ ಹೊಸ ಪೀಳಿಗೆಯ ಸೇವೆಯನ್ನು ನೀಡಲು ಮುಂದಾಗಿದ್ದು ಜೊತೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆ, ರೈತ ಸದಸ್ಯರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆ ಸೌಲಭ್ಯ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಒದಗಿಸಲಾಗುತ್ತಿದೆ,. ರಾಜ್ಯದಲ್ಲಿಯೇ ಯುಪಿಐ ಪಾವತಿ ಪದ್ಧತಿಯನ್ನು ಅಳವಡಿಸಿಕೊಂಡ ಮೊದಲ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಗಿದ್ದು ಬ್ಯಾಂಕಿನ ಗ್ರಾಹಕರಿಗೆ ಎಟಿಎಂ ಮೂಲಕ ಹಣ ಡ್ರಾ ಮಾಡುವುದು ಹಾಗೂ ಠೇವಣಿ ಮಾಡುವುದು ಮತ್ತು ಬಿಲ್‍ಗಳನ್ನು ಪಾವತಿಸುವ ಬಗ್ಗೆ ಮಾಹಿತಿ ಕಲ್ಪಿಸಿಕೊಡಲು ಬ್ಯಾಂಕಿನ ಎರಡು ಮೊಬೈಲ್ ವ್ಯಾನ್‍ಗಳ ಮೂಲಕ ಪ್ರಚಾರ ಮಾಡುವ ಯೋಜನೆ ರೂಪಿಸಿಕೊಂಡಿರುವುದನ್ನು ನಬಾರ್ಡ್ ಪ್ರಶಂಶಿಸಿದೆ ಎಂದು ತಿಳಿಸಿದರು.
ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಜೆ.ಎಂ.ವೃಷಭೇಂದ್ರಯ್ಯ, ಟಿ.ಎಂ.ಚಂದ್ರಶೇಖರಯ್ಯ, ಗುರುಸಿದ್ಧನಗೌಡ, ಕೋಳೂರು ಮಲ್ಲಿಕಾರ್ಜುನಗೌಡ, ಎಲ್.ಎಸ್. ಆನಂದ್, ಚಿದಾನಂದ ಐಗೋಳ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿ.ಎಸ್. ಹಿರಿಯ ಸಿಬ್ಬಂದಿಗಳಾದ ತಿಮ್ಮಾರಡ್ಡಿ, ಡಿ.ಶಂಕರ, ಶಶಿಕಾಂತ ಹೆಸರೂರು, ಮರಿಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹೊಸ ಶಾಖೆಗಳಿಗೆ ಪ್ರಸ್ತಾವನೆ:
ಬ್ಯಾಂಕ್ ತನ್ನ ಕಾರ್ಯಕ್ಷೇತ್ರವನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತಷ್ಟು ಶಾಖೆಗಳನ್ನು ಆರಂಭಿಸಲು ಚಿಂತಿಸಿದ್ದು ಈಗಾಗಲೆ 11 ಹೊಸ ಶಾಖೆಗಳ ಸ್ಥಾಪನೆಗೆ ಆರ್‍ಬಿಐಗೆ ಪ್ರಸ್ತಾವನೆ ಕಳುಹಿಸಿದೆ ಅನುಮತಿ ದೊರೆಯುತ್ತಿದ್ದಂತೆ ಶಾಖೆ ಆರಂಭಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಆನಂದ್‍ಸಿಂಗ್ ರಾಜಿನಾಮೆ ಅಂಗೀಕಾರ
ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರ ರಾಜೀನಾಮೆ ಅಂಗೀಕರವಾಗಿದ್ದು, ಈ ಕುರಿತು ಚುನಾವಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳುವುದಾಗಿ ಪ್ರಭಾರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಿಳಿಸಿದರು.

One attachment • Scanned by Gmail