ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆಸಹಕಾರಿ, ರಾಜಕೀಯ ವಲಯದಲ್ಲಿ ಚೆರ್ಚೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು16: ಮಾಜಿ ಸಚಿವ ಆನಂದ ಸಿಂಗ್ ಅವರು ಬಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ ಕಳೆದ ಜೂ 27 ರಂದು ಬ್ಯಾಂಕ್ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದು, ಇದೀಗ ಸಹಕಾರಿ ಮತ್ತು ರಾಜಕೀಯ ವಲಯದಲ್ಲಿ ಚೆರ್ಚೆಗೆ ಕಾರಣವಾಗಿದೆ. ನನ್ನ ವೈಯಕ್ತಿಕ ಕಾರಣದಿಂದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವೆ. ಜುಲೈ ಒಂದರಿಂದ ಅನ್ವಯವಾಗುವಂತೇ ಪರಿಗಣಿಸಲು ಪತ್ರದಲ್ಲಿ ತಿಳಿಸಿದ್ದಾರೆ.  ಬ್ಯಾಂಕ್‍ನ ನಿರ್ದೇಶಕರ ಚುನಾವಣೆ ಅಕ್ಟೋಬರ್‍ನಲ್ಲಿ ನಡೆಯಲಿದೆ. ಇನ್ನೂ ಎರಡು ತಿಂಗಳು ಅವಧಿ ಇದ್ದರೂ ಬ್ಯಾಂಕ್‍ನ ಸಿಇಒಗೆ ರಾಜೀನಾಮೆ ಪತ್ರ ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನೂತನ ವಿಜಯನಗರ ಜಿಲ್ಲೆ ಅಭಿವೃದ್ಧಿ ಹಾಗೂ ರಾಜಕೀಯ ಒತ್ತಡದ ನಡುವೆ ಶತಮಾನ ಪೂರೈಸಿರುವ ಬಿ.ಡಿ.ಸಿ.ಸಿ.ಬ್ಯಾಂಕ್ ಅಭಿವೃದ್ಧಿಗೆ ನ್ಯಾಯ ಕೊಡಲು ಆಗುವುದಿಲ್ಲ ಎಂದು ಅವರು ಹಿಂದೊಮ್ಮೆ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಅವರು ಮುಂದಾಗಿದ್ದರು. ಕೊನೆಗೆ ಬ್ಯಾಂಕಿನ ನಿರ್ದೇಶಕರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಹುದ್ದೆಯಲ್ಲಿ ಮುಂದುವರೆದಿದ್ದರು.
ಆನಂದ ಸಿಂಗ್ ಬ್ಯಾಂಕ್‍ನ ಅಧ್ಯಕ್ಷರಾದ ಬಳಿಕ ಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ಬ್ಯಾಂಕ್‍ನಲ್ಲಿ ಹಲವು ಸುಧಾರಣೆ ತಂದಿದ್ದರು. ಸಿಬ್ಬಂದಿ ಕೊರತೆ ಸರಿದೂಗಿಲು ನೇಮಕಾತಿ ಕೂಡ ನಡೆಸಲಾಗಿತ್ತು. ರೈತರ ಹಿತ ಕಾಪಾಡಲು, ರೈತರಿಗೆ ಹೆಚ್ಚಿನ ಸಾಲ-ಸೌಲಭ್ಯ ನೀಡಲು ಕ್ರಮವಹಿಸಿದ್ದರು. ಈಗ ದಿಡೀರನೇ ರಾಜೀನಾಮೆ ಸಲ್ಲಿಸಿದ್ದಾರೆ.
ಆನಂದ ಸಿಂಗ್ ಅವರು ಪ್ರಭಾವ ಬೆಳಸಿ ಬಿ.ಡಿ.ಸಿ.ಸಿ.ಬ್ಯಾಂಕ್‍ಗೂ ಎಂಟ್ರಿ ಕೊಟ್ಟಿದ್ದಾರೆ. ಸಹಕಾರಿ ಕೇತ್ರದ ಗಂಧಗಾಳಿ ಗೊತ್ತಿಲ್ಲದ ಅವರಿಂದ ಬ್ಯಾಂಕಿನ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂಬ ಮಾತುಗಳು ಅಂದು ಸಹಕಾರಿ ವಲಯದಲ್ಲಿ ಕೇಳಿ ಬಂದಿದ್ದವು.
ಮಾಜಿ ಸಚಿವ ಆನಂದ ಸಿಂಗ್ ಅವರು, ವಯಕ್ತಿಕ ಕಾರಣ ನೀಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ  ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅವರ ಮನವೊಲಿಸುವ ಪ್ರಯತ್ನ ನಡೆದಿದೆ. ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ಚೆರ್ಚಿಸಲಾಗುವುದು.
ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷರು,
ಬಿ.ಡಿ.ಸಿ.ಸಿ.ಬ್ಯಾಂಕ್, ಹೊಸಪೇಟೆ.