
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ. 12: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ವ್ಯಾಪಾರಿಗಳು, ವರ್ತಕರು ಮತ್ತು ಕೈಗಾರಿಕೆಗಳಲ್ಲಿಯ ಲೆಕ್ಕಪತ್ರ ವಿಭಾಗದ ಸಿಬ್ಬಂದಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ `ಟ್ಯಾಲಿ ಅವೇರ್ನೆಸ್ ಪ್ರೋಗ್ರಾಂ’ನಲ್ಲಿ 150ಕ್ಕೂ ಹೆಚ್ಚು ಜನರು ಪಾಲ್ಗೊಂಡು ಟ್ಯಾಲಿ ಬಳಕೆ ಕುರಿತು ಸಾಕಷ್ಟು ಜ್ಞಾನವನ್ನು ಪಡೆದಿದ್ದಾರೆ.
ಫೋರಂ ಆಫ್ ವುಮೆನ್ ಎಂಟ್ರಪ್ಯುನರ್ನ ಅಧ್ಯಕ್ಷೆ ರೂಪರಾಣಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಪನ್ಮೂಲ ವ್ಯಕ್ತಿಯಾಗಿ, ಪ್ರತಿ ಜಿಲ್ಲೆಯಲ್ಲೂ `ಟ್ಯಾಲಿ ಅವೇರ್ನೆಸ್ ಪ್ರೋಗ್ರಾಂ’ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಪ್ರತಿಯೊಂದು ವ್ಯವಹಾರಗಳು ಎಲೆಕ್ಟ್ರಾನಿಕ್ ಆಧರಿಸಿ ನಡೆಯುತ್ತಿರುವ ಕಾರಣ ದೈನಂದಿನ ವ್ಯವಹಾರದಲ್ಲಿ ಆರ್ಥಿಕ ಮತ್ತು ಲೆಕ್ಕಪತ್ರ ವಿಭಾಗಗಳಲ್ಲಿ ಕೆಲಸ ಮಾಡುವವರು ಆಧುನಿಕ ಬದಲಾವಣೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಕೆಲಸವನ್ನು ಸುಲಭ ಮತ್ತು ಸರಳ ಮಾಡಿಕೊಳ್ಳಬೇಕು. ಉದ್ಯಮದಲ್ಲಿಯ ಹೊಸತನಗಳನ್ನು ಅಳವಡಿಸಿಕೊಂಡು ಯಶಸ್ಸನ್ನು ಸಾಧಿಸಲು ಈ ಶಿಬಿರವು ಸಾಕಷ್ಟು ನೆರವಾಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಟ್ಯಾಲಿ ಉದ್ಯಮಿಗಳಿಗೆ ದೈನಿಂದಿನ ವ್ಯವಹಾರದ ಅವಿಭಾಜ್ಯವಾಗಿದೆ. ಟ್ಯಾಲಿ ಬಳಕೆ ಕುರಿತು ಸಿಬ್ಬಂದಿಯು ತರಬೇತಿ ಪಡೆದಲ್ಲಿ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಒಂದು ದಿನದ ತರಬೇತಿ ಕಾರ್ಯಾಗಾರ ಅನೇಕರಿಗೆ ಜ್ಞಾನವನ್ನು, ಕೌಶಲ್ಯವನ್ನು ಹೆಚ್ಚಿಸಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶ್ವಂತ್ರಾಜ್ ನಾಗಿರೆಡ್ಡಿ ಅವರು,
ಈಗಾಗಲೇ ಅನೇಕರು ಟ್ಯಾಲಿ ತಂತ್ರಾಂಶವನ್ನು ದೈನಂದಿನ ವ್ಯವಹಾರದಲ್ಲಿ ಬಳಸುತ್ತಿರಬಹುದು. ಆದರೆ, ಇತ್ತೀಚಿನ ಬದಲಾವಣೆಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಕೊಳ್ಳಲು ಎದುರಾಗುತ್ತಿದ್ದ ಸಂಕಷ್ಟಗಳು, ತಾಂತ್ರಿಕ ಸಮಸ್ಯೆಗಳು ಮತ್ತು ಇನ್ನಿತರ ತೊಡಕುಗಳನ್ನು ಇತ್ಯರ್ಥ ಮಾಡಿಕೊಳ್ಳಲು ಈ ತರಬೇತಿ ಕಾರ್ಯಾಗಾರ ನೆರವಾಗಲಿದೆ ಎಂದರು.
ಎಜಿಎಂ ಪ್ರಾಡಕ್ಟ್ ಎಕ್ಸಲೆನ್ಸ್ ಟ್ಯಾಲಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಿ.ಎಂ. ಕೆ. ರಾಜಶೇಖರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮಹಾರುದ್ರು ಗೌಡ, ಉಪಾಧ್ಯಕ್ಷರಾದ ಎ.ಮಂಜುನಾಥ್, ಕೆ.ರಮೇಶ್ ಬುಜ್ಜಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡನಗೌಡ, ವಿ. ರಾಮಚಂದ್ರ, ಟಿ. ಶ್ರೀನಿವಾಸರಾವ್, ಪತ್ರಿಕಾ ಮತ್ತು ಮಾಧ್ಯಮ ಚೇರ್ಮನ್, ಕಾರ್ಯಕಾರಿ ಸಮಿತಿ ಸದಸ್ಯ ಮರ್ಚೇಡ್ ಮಲ್ಲಿಕಾರ್ಜುನ, ಐಟಿ ಸಮಿತಿ ಚೇರ್ಮನ್ ಜಿತೇಂದ್ರ ಪ್ರಸಾದ್, ಬಿಡಿಸಿಸಿ&ಐನ ನಿಕಟಪೂರ್ವ ಅಧ್ಯಕ್ಷ ವಿ. ರವಿಕುಮಾರ್, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಹ್ವಾನಿತರು, ಅಸೋಸಿಯೇಷನ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.