ಬಿಡಿಎ ಭ್ರಷ್ಟರ ವಿರುದ್ಧ ಕ್ರಮ : ಸಿಎಂ

ಬೆಂಗಳೂರು,ನ.೨೧- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಕೊನೆ ಹಾಡಿ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ ಎಂದು ಹಿಂದೆಯೇ ಹೇಳಿದ್ದೆ. ಈಗಲೂ ಅಷ್ಟೆ ಬಿಡಿಎನಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಬಿಡಿಎಯ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರ ಪತ್ತೆಹಚ್ಚಿರುವ ಎಸಿಬಿ ನೀಡುವ ವರದಿ, ಶಿಫಾರಸ್ಸು ಅನ್ವಯ ಕ್ರಮ ನಿಶ್ಚಿತ. ಯಾವುದೇ ಅಧಿಕಾರಿ ತಪ್ಪಿತಸ್ಥ ಇದ್ದರೂ ಕ್ರಮಕೈಗೊಳ್ಳುತ್ತೇವೆ. ಈ ಹಿಂದೆ ಇದ್ದ ಅಧಿಕಾರಿಗಳಿರಬಹುದು, ಈಗಿರುವ
ಅಧಿಕಾರಿಗಳಿರಬಹುದು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಬಿಡಿಎ ಅನ್ನು ಒಂದು ಬಾರಿ ಸ್ವಚ್ಛಗೊಳಿಸಿ ಅದನ್ನು ಸರಿ ದಾರಿಗೆ ತರುವ ಉದ್ದೇಶ ಹೊಂದಿದ್ದೇನೆ. ಬಿಡಿಎ ಮೂಲಕ ನಾಗರಿಕ ಸೇವೆಗಳನ್ನು ಸಮರ್ಪಕವಾಗಿ ಸಿಗುವ ಕೆಲಸ ಮಾಡುತ್ತೇನೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಬಿಡಿಎ ಅಧ್ಯಕ್ಷ ವಿಶ್ವನಾಥ್ ಸಹ ಹಲವು ವಿಚಾರಗಳನ್ನು ಗಮನಕ್ಕೆ ತಂದಿದ್ದರೂ ಅದರಂತೆ ಎಸಿಬಿ ಅವರು ದಾಳಿ ನಡೆಸಿದ್ದಾರೆ ಎಂದರು.