ಬಿಡಿಎ ಅಕ್ರಮಗಳ ತನಿಖೆಗೆ ಕಾರ್ಯಪಡೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೩- ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ವಿಶೇಷ ಕಾರ್ಯಪಡೆ ರಚಿಸುವ ಮಾದರಿಯಲ್ಲೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲೂ ನಡೆದಿರುವ ಅವ್ಯವಹಾರಗಳ ತನಿಖೆಗೆ ಇದೇ ರೀತಿಯ ಕಾರ್ಯಪಡೆ ರಚಿಸಿ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಅವ್ಯವಹಾರಗಳು ನಡೆದಿದ್ದು, ಅವುಗಳ ತನಿಖೆಗೆ ಹಿರಿಯ ಐಎ ಎಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವುದು. ಅದೇ ಮಾದರಿಯಲ್ಲಿ ಬಿಡಿಎನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲಾಗುವುದು ಎಂದರು.
ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲೆಲ್ಲಿ ಅವ್ಯವಹಾರವಾಗಿದೆ ಎನ್ನುವುದನ್ನು ಪತ್ತೆಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಯಾಕೆ ನಡೆಸುತ್ತೀರಿ, ಬೆಂಗಳೂರು ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ಎಂದು ಶಾಸಕರೊಬ್ಬರು ಸಲಹೆ ನೀಡಿದ್ದಾರೆ ಅದನ್ನ ಆಧರಿಸಿ ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಲಾಗುವುದು ಎಂದರು.
ಇದೇ ರೀತಿ ಬಿಎಂಆರ್‌ಸಿಎಲ್ ಭೂಸ್ವಾಧೀನ ಪ್ರಕರಣದಲ್ಲಿ ಸರ್ಕಾರಿ ಭೂಮಿಗೆ ಖಾಸಗಿಯವರಿಗೆ ಪರಿಹಾರ ನೀಡಿದ್ದರೆ ಅದ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮರಿತಿಬ್ಬೇಗೌಡ, ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ರಿಪಬ್ಲಿಕ್ ಆಫ್ ಬೊಮ್ಮಸಂದ್ರ ಎನ್ನುವಂತಾಗಿದೆ. ಇಲ್ಲಿ ಬಿಡಿಎಗೆ ಸೇರಿದ ೩ ಸಾವಿರ ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಕಬಳಿಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಕ್ಕೆ ದಾಖಲೆ ಸಮೇತ ಒತ್ತಾಯ ಮಾಡುತ್ತಿದ್ದರೂ ಯಾವುದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ದಾಖಲೆಗಳನ್ನು ಕೊಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.