ಬಿಡಬ್ಲ್ಯೂಎಫ್ ವಿಶ್ವ ಟೂರ್​ ಪ್ರಶಸ್ತಿ ಸುತ್ತಿಗೆ ಸಿಂಧು ಲಗ್ಗೆ

ಬಾಲಿ, ಡಿ.4- ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ​ ಪಿವಿ ಸಿಂಧು ಜಪಾನ್​ನ ಅಕಾನೆ ಯಮಗುಚಿ ಅವರನ್ನು ಮಣಿಸಿ ಬಿಡಬ್ಲ್ಯೂಎಫ್ ವಿಶ್ವ ಟೂರ್​ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಬಲ್ ಒಲಿಂಪಿಕ್ ವಿಜೇತೆ ಸಿಂಧು, ಯಮಗುಚಿ ವಿರುದ್ಧ ನಡೆದ ರೋಚಕ ಕದನದಲ್ಲಿ 21-15, 15-21, 21-19 ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದರು.
ಈ ಗೆಲುವಿನ ಮೂಲಕ ವಿಶ್ವದ 3ನೇ ಶ್ರೇಯಾಂಕದ ಜಪಾನ್ ಆಟಗಾರ್ತಿಯ ವಿರುದ್ಧ 13-8ರಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡರು.
ವರ್ಷದ ಕೊನೆಯಲ್ಲಿ ನಡೆಯುವ ಟೂರ್ನಮೆಂಟ್​ನಲ್ಲಿ ಸಿಂಧುಗೆ 3ನೇ ಫೈನಲ್ ಇದಾಗಿದೆ. 2018ರಲ್ಲಿ ಚಾಂಪಿಯನ್ ಆಗುವ ಮೂಲಕ, ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದರು. ಹಾಲಿ ವಿಶ್ವ ಚಾಂಪಿಯನ್​ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಆ್ಯನ್​ ಸೇ ಯಂಗ್ ವಿರುದ್ಧ ಸಿಂಧು ಸೆಣಸಲಿದ್ದಾರೆ.