ಬಿಡದೆ ಸುರಿದ ಮಳೆ: ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು; ಕುಸಿದ ಶಾಲಾ ಕಟ್ಟಡ

ದಾವಣಗೆರೆ,ಜ.9: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಾದ ನಗರದ ಚಾಮರಾಜ ಪೇಟೆ, ಕೆಆರ್ ಮಾರುಕಟ್ಟೆ ಪ್ರದೇಶ, ಬಿನ್ನಿ ಕಂಪನಿ ರಸ್ತೆ ಅಂಗಡಿಗಳಲ್ಲಿ ನೀರು ನುಗ್ಗಿ ಅಪಾರ ಹಾನಿಯಾಗಿದೆ.ಸುಮಾರು ನಾಲ್ಕೈದು ತಾಸುಗಳ ಕಾಲ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಕೆಆರ್ ಮಾರುಕಟ್ಟೆ, ಪಾಲಿಕೆ ಸಾಲು ಮಳೆಗೆಗಳಿಗೆ ಚರಂಡಿ, ಮಳೆ ನೀರು ನುಗ್ಗಿ ಅಂಗಡಿಗಳಿಗೆಲ್ಲಾ ನುಗ್ಗಿ, ಲಕ್ಷಾಂತರ ರು.ಗೂ ಅದಿಕ ನಷ್ಟ ಸಂಭವಿಸಿದೆ. 
ಚಿಕ್ಕಪುಟ್ಟ ವ್ಯಾಪಾರಸ್ಥರು ಪಾಲಿಕೆ ಮಳಿಗೆಗಳನ್ನು ಬಾಡಿಗೆ ಪಡೆದು, 2-3 ಲಕ್ಷ ರು.ಗಳಷ್ಟು ಬಂಡವಾಳ ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿ ಪೂರ್ಣಗೊಳ್ಳದೇ ವರ್ಷಾನುಗಟ್ಟಲೇ ತೊಂದರೆ ಅನುಭವಿಸಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತೆ ಇಂದು ಸುರಿದ ಮಳೆ ಆರ್ಥಿಕ ಆಪತ್ತನ್ನೇ ತಂದೊಡ್ಡಿದೆ.ಕೊರೋನಾದಿಂದಾದಿ ತಿಂಗಳುಗಟ್ಟಲೇ ವ್ಯಾಪಾರವಿಲ್ಲದೇ, ಈಗ ಕೊರೋನಾ ಸಕ್ರಿಯ ಕೇಸ್‌ಗಳ ಸಂಖ್ಯೆ ಕಡಿಮೆಯಾಗಿ ಬದುಕು ಒಂದು ಹಂತಕ್ಕೆ ಬರುತ್ತಿದೆಯೆನ್ನುವಾಗಲೇ ಸುರಿದ ಅಕಾಲಿಕ ಮಳೆ ವ್ಯಾಪಾರಸ್ಥರನ್ನು ಮತ್ತಷ್ಟು ಸಂಕಷ್ಟಗಳ ಸುಳಿಗೆ ಸಿಲುಕಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಚಾಮರಾಜಪೇಟೆ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿ ಚರಂಡಿಗೆ ಹರಿದು ಬರುತ್ತಿದ್ದ ತ್ಯಾಜ್ಯ ನೀರು, ಮಳೆ ನೀರು ಸೇರಿಕೊಂಡು ಕಿರು ಜಲಪಾತದಂತೆ ಮಾರ್ಪಟ್ಟು, ಅಂಗಡಿಗಳಿಗೆ ನುಗ್ಗಿದ್ದರಿಂದ ಅಂಗಡಿ ಮಾಲೀಕ, ಕೆಲಸಗಾರರು, ಕುಟುಂಬ ವರ್ಗ ಏನೂ ಮಾಡಲಾಗದ ಅಸಹಾಯಕವಾಗಿ ನೋಡುತ್ತಾ ನಿಲ್ಲಬೇಕಾಯಿತು.ಭಾರೀ ಮಳೆ ಜೊತೆಗೆ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದ ನೀರು ಆಹಾರ ಧಾನ್ಯ, ಎಣ್ಣೆ, ಕಾಳು, ಕಡಿ, ಹತ್ತಿ, ಪೂಜಾ ಸಾಮಗ್ರಿ, ವಿಭೂತಿ ಹೀಗೆ ನಾನಾ ವಸ್ತುಗಳನ್ನು ಹಾಳು ಮಾಡಿತು. ಸಾಲ ಸೋಲ ಮಾಡಿಕೊಂಡು, ಬಂಡವಾಳ ಹಾಕಿಕೊಂಡಿದ್ದ ಬಡ ವ್ಯಾಪಾರಸ್ಥರು ಈ ನಷ್ಟ ತುಂಬಿಕೊಡುವವರು ಯಾರು? ಸಾಲ ಮಾಡಿ ಒಂದಿಷ್ಟು ವ್ಯಾಪಾರ ಮಾಡಿಕೊಂಡು ಬದುಕುವುದಕ್ಕೂ ಆಗುತ್ತಿಲ್ಲ. ಹೀಗಾದರೆ ನಮ್ಮ ಬದುಕು ಹೇಗೆ, ಕುಟುಂಬ ನಿರ್ವಹಣೆ ಹೇಗೆ ಮಾಡಬೇಕೆಂಬ ಜನರ ಪ್ರಶ್ನೆಗೆ ಸ್ಮಾರ್ಟ್ ಸಿಟಿ ಯೋಜನೆ ಕಾಲಮಿತಿಯಲ್ಲಿ ಮುಗಿಸುವುದಾಗಿ ಟೆಂಡರ್ ಪಡೆದ ಗುತ್ತಿಗೆದಾರರನ್ನು ಹಿಡಿದು, ಅಧಿಕಾರಿಗಳು, ಜನ ಪ್ರತಿನಿಧಿಗಳು ಕೇಳಬೇಕಾಗಿದೆ. ದಾವಣಗೆರೆ ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಭಾರೀ ಮಳೆಯಾಗಿದೆ. ದಾವಣಗೆರೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು. ಅಕಾಲಿಕ ಮಳೆಯಾಗಿದ್ದರಿಂದ ಜನರು ಓಡಾಟಕ್ಕೆ ತೊಂದರೆ ಉಂಟಾಗಿತ್ತು. ನಗರದ ಪಿ.ಬಿ. ರಸ್ತೆ, ಹೊಂಡದ ಸರ್ಕಲ್, ವಿದ್ಯಾನಗರ , ಡಿಸಿಎಂ ಲೇಔಟ್ ಸೇರಿದಂತೆ ಅನೇಕ ಕಡೆ ಮಳೆಯಾಗಿದೆ. ಅಕಾಲಿಕ ಮಳೆಯಿಂದ ರೈತರು ಪರದಾಟ ನಡೆಸಿದರು.ತಾಲ್ಲೂಕಿನ ಹೂವಿನಮಡು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕಟ್ಟಡ ಕುಸಿದುಬಿದ್ದಿದೆ. ಒಟ್ಟಾರೆ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.