ಬಿಟ್ ಕಾಯಿನ್ ಹಗರಣ ದಾಖಲೆ ಬಹಿರಂಗಕ್ಕೆ ಡಿಕೆಶಿ ಆಗ್ರಹ

ಬೆಂಗಳೂರು,ಅ.೧೦- ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ. ಇಡಿ ಗೆ ಬರೆದಿರುವ ಪತ್ರ ಏನು. ಎಷ್ಟು ಬಿಟ್ ಕಾಯಿನ್ ವಶಪಡಿಸಿಕೊಳ್ಳಲಾಗಿದೆ. ಪ್ರಧಾನಿಗೆ ಯಾರು ಪತ್ರ ಬರೆದಿದ್ದಾರೆ. ಎಲ್ಲವನ್ನೂ ಬಹಿರಂಗಗೊಳಿಸುವಂತೆ ಅವರು ಒತ್ತಾಯಿಸಿದರು.
ಈ ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳಿದ್ದಾರೆ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರ ಮಕ್ಕಳೇ ಇರಲಿ, ಯಾರೇ ಇರಲಿ ತಾಕತ್ತಿದ್ದರೆ ಅವರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಈ ಪ್ರಕರಣದಲ್ಲಿ ಎಷ್ಟು ಜನರ ಹೆಸರಿದೆ, ಎಷ್ಟು ಜನ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಗೃಹ ಸಚಿವರಿಗೆ ಗೊತ್ತಿದೆಯೇ, ಗೃಹ ಸಚಿವರು ಯಾಕೆ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಲ್ಲವನ್ನೂ ಜನರ ಮುಂದಿಡಲಿ. ಈ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬಳಿಯೂ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷ್ಯಗಳಿವೆ. ಇದನ್ನು ನಾವು ಜನರ ಮುಂದಿಡುತ್ತೇವೆ, ನ್ಯಾಯಾಲಯದ ತನಿಖೆ ಇವೆಲ್ಲ ನಂತರ ಎಂದು ಪರೋಕ್ಷವಾಗಿ ಸಿ.ಟಿ ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಈ ಹಗರಣದ ಬಗ್ಗೆ ಮಾಧ್ಯಮಗಳಲ್ಲೂ ತರಹೇವಾರಿ ಸುದ್ದಿಗಳು ಬರುತ್ತಿವೆ. ಮಾಧ್ಯಮಗಳು ಹೆಸರುಗಳನ್ನು ಹೇಳುತ್ತಿಲ್ಲ. ಯಾರ ಮಕ್ಕಳಿದ್ದಾರೆ, ಶಿವಕುಮಾರ್ ಮಕ್ಕಳಿದ್ದಾರಾ, ಬೊಮ್ಮಾಯಿ ಅವರ ಮಕ್ಕಳಿದ್ದಾರಾ, ಕಟೀಲು ಅವರ ಮಕ್ಕಳಿದ್ದಾರಾ ಎಲ್ಲವೂ ಬಹಿರಂಗವಾಗಬೇಕು ಎಂದರು.
ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆಗಳಿದ್ದರೆ ಕಾಂಗ್ರೆಸ್ ಬಿಡುಗಡೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿ ಕಾರಿದ ಅವರು, ಅಧಿಕಾರದಲ್ಲಿರುವವರು ನಾವಲ್ಲ, ಅಧಿಕಾರದಲ್ಲಿರುವವರು ಬಿಜೆಪಿ ಅವರು, ಅವರೇ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.