ಬಿಟ್ ಕಾಯಿನ್ ಸದ್ದು: ಹಲವೆಡೆ ಎಸ್‌ಐಟಿ ದಾಳಿ

ತನಿಖೆ ಚುರುಕು

ಬೆಂಗಳೂರು,ಸೆ.೧೨- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಹಗರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಪ್ರಮುಖ ಮೂವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕೋರ್ಟ್‌ನಿಂದ ನಿನ್ನೆ ಸರ್ಚ್ ವಾರಂಟ್ ಪಡೆದುಕೊಂಡು ಇಂದು ಬೆಳಗ್ಗೆಯಿಂದಲೇ ಪ್ರಮುಖ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ದ್ ಮನೆಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ಮಾಡಿದ್ದಾರೆ. ಸದಾಶಿವನಗರದಲ್ಲಿರುವ ಸುನೀಶ್ ಹೆಗ್ಡೆ, ಪ್ರಸಿದ್ದ್ ಹಾಗೂ ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆಯಿಂದ ಈ ಮೂವರು ಮನೆಗಳಲ್ಲಿ ನಡೆಸಿದ ಪರಿಶೀಲನೆಯು ಮಧ್ಯಾಹ್ನದವರೆಗೂ ಮುಂದುವರೆದಿದ್ದು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಎಸ್ ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದೆದ್ದ ಬಿಟ್ ಕಾಯಿನ್ ಹಗರಣ ಮತ್ತೆ ಸದ್ದು ಮಾಡುತ್ತಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಿದ ಬಳಿಕ ರಾಜ್ಯ ಸರ್ಕಾರ ಮರು ತನಿಖೆಗೆ ಆದೇಶಿಸಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮನೀಷ್ ಕರ್ಬಿಕರ್ ನೇತೃತ್ವದಲ್ಲಿ ತಂಡ ರಚಿಸಿದೆ. ಆದರೆ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಇಸ್ರೇಲ್ ದೇಶದ ಸಹಾಯ ಪಡೆಯಲು ಹಂತ-ಹಂತ ಪ್ರಕ್ರಿಯೆ ಪಾಲಿಸಬೇಕಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ವಾಲೇಟ್‌ಗಳನ್ನ ಫ್ರೀಜ್ ಮಾಡುವಷ್ಟು ಟೆಕ್ನಾಲಜಿ ನಮ್ಮಲ್ಲಿ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ.ಹೀಗಾಗಿ ರಾಜ್ಯ ಸಿಐಡಿ ಎಸ್ ಐಡಿ ತಂಡ ಇದಕ್ಕಾಗಿ ಇಸ್ರೇಲ್ ಬಳಿ ಸಹಾಯ ಕೇಳುವ ಸಾಧ್ಯತೆ ಇದ್ದು, ಅದರಕ್ಕೂ ಮೊದಲು ಪ್ರಾಥಮಿಕವಾಗಿ ಪ್ರಮುಖ ಆರೋಪಿಗಳ ಜನ್ಮಜಾಲಾಡುತ್ತಿದ್ದಾರೆ.ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರುಗಳ ಹೆಸರುಗಳು ಕೇಳಿಬಂದಿದ್ದವು. ಇದರಿಂದ ಈ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಎಸ್‌ಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ತನಿಖೆಯಲ್ಲಿ ಏನೆಲ್ಲ ಅಂಶಗಳು ಬೆಳಕಿಗೆ ಬರಲಿವೆ ಎನ್ನುವುದನ್ನು ಕಾದುನೋಡಬೇಕಿದೆ.
ಏನಿದು ಬಿಟ್ ಕಾಯಿನ್
ಬಿಟ್ ಕಾಯಿನ್ ಹಗರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಪ್ರಕರಣವಾಗಿದ್ದು, ಮೂರು ವರ್ಷಗಳ ಹಿಂದೆ ಡ್ರಗ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕಾಂತ್ ಯಾನೆ ಶ್ರೀಕಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಬಂಧಿತನ ವಿಚಾರಣೆ ನಡೆಸಿದ ವೇಳೆ ಈ ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದಿತ್ತು. ಈ ವೇಳೆ ನಗರದ ಕಾಟನ್‌ಪೇಟೆ ಠಾಣೆಯಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಸಿಸಿಬಿ ನಡೆಸಿತ್ತು. ಜೊತೆಗೆ ಇನ್ನೊಂದೆಡೆ ಇ ಪ್ರೊಕ್ಯುರ್ಮೆಂಟ್ ವೆಬ್‌ಸೈಟ್ ಹ್ಯಾಕ್ ಪ್ರಕರಣ ಸಂಬಂಧ ಶ್ರೀಕಿ ವಿರುದ್ಧ ಸಿಐಡಿ ಕೂಡ ಪ್ರತ್ಯೇಕ ತನಿಖೆ ನಡೆಸಿತ್ತು.ಆದರೆ ಈ ವೇಳೆ ಬಿಟ್ ಕಾಯಿನ್ ರಾಜಕೀಯ ತಿರುವು ಪಡೆದುಕೊಂಡಿತ್ತು. ಬಿಟ್ ಕಾಯಿನ್ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹ್ಯಾಕರ್ ಶ್ರೀಕಿಯನ್ನು ಬಳಸಿ ಆಡಳಿತ ಪಕ್ಷದವರು ಭಾರೀ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದರು.