ಬಿಟ್ ಕಾಯಿನ್ ಕಾಂಗ್ರೆಸ್ ರಾಜಕೀಯ ಸಿಎಂ ಟೀಕೆ

ಬೆಂಗಳೂರು, ನ. ೧೫- ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಇಲ್ಲದೇ ಇರುವ ವಿಷಯವನ್ನು ಜೀವಂತ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ನವರು ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ದೂರಿದರು.
ತಿರುಪತಿಯಿಂದ ಹಿಂದಿರುಗಿದ ನಂತರ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ ಕೇವಲ ಆರೋಪವಷ್ಟೇ. ಅದು ಬಿಟ್ಟರೆ ಇನ್ನೇನೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ಬಿಟ್ ಕಾಯಿನ್ ಪ್ರಕರಣದಲ್ಲಿ ಪದೇ ಪದೇ ಆರೋಪ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಇಲ್ಲದೆ ಇರುವ ವಿಷಯಕ್ಕೆ ಜೀವ ತುಂಬುವ ಪ್ರಯತ್ನ ಕಾಂಗ್ರೆಸ್‌ನವರದ್ದು ಎಂದು ಕಿಡಿಕಾರಿದರು.
ಬಿಟ್ ಕಾಯಿನ್‌ಗೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಕಾಂಗ್ರೆಸ್‌ನವರು ಬಿಡುಗಡೆ ಮಾಡಲಿ ಎಂದು ಈಗಾಗಲೇ ಹೇಳಿದ್ದೇನೆ. ಇವತ್ತು ಅದನ್ನೇ ಹೇಳುತ್ತಿದ್ದೇನೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದರು.
ಕಾಂಗ್ರೆಸ್ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಇಡಿಗೆ ಅಥವಾ ರಾಜ್ಯ ಪೊಲೀಸರಿಗೆ ಕೊಡಲಿ ಎಂದು ಅವರು ಪುನರುಚ್ಛರಿಸಿದರು.
ಯಶಸ್ವಿ ಸಭೆ: ನೀರಾವರಿ ವಿಚಾರ ಚರ್ಚೆ
ತಿರುಪತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ನದಿ ನೀರು ಹಂಚಿಕೆ, ಕೃಷ್ಣ, ಕಾವೇರಿ, ಗೋದಾವರಿ ಪಾಲಾರ್ ನದಿ ಜೋಡಣೆ ವಿಚಾರಗಳು ಚರ್ಚೆಯಾಗಿವೆ ಎಂದರು.
ಕೃಷ್ಣ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಯನ್ನು ಬೇಗ ಹೊರಡಿಸುವಂತೆ ಈ ಸಭೆಯಲ್ಲಿ ಕೇಂದ್ರಕ್ಕೆ ಒತ್ತಾಯ ಮಾಡಿದ್ದೇನೆ. ಹಾಗೆಯೇ ಕೃಷ್ಣ ನದಿ ನೀರಿನ ರಾಜ್ಯದ ಪಾಲಿನ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ ಎಂದರು.
ಕೃಷ್ಣ, ಕಾವೇರಿ, ಗೋದಾವರಿ ಪಾಲಾರ್ ನದಿ ಜೋಡಣೆ ವಿಚಾರವೂ ಚರ್ಚೆಯಾಯಿತು. ನಾನು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದೇನೆ. ನದಿಗಳ ಜೋಡಣೆಯ ಯೋಜನಾ ವರದಿಗೂ ಮುನ್ನ ರಾಜ್ಯಗಳ ನೀರಿನ ಪಾಲು ಹಂಚಿಕೆಯಾಗಬೇಕು ಎಂಬ ಒತ್ತಾಯವನ್ನು ಮಾಡಿದ್ದೇನೆ. ರಾಜ್ಯದ ಅಹವಾಲನ್ನು ಆಲಿಸಿದ ಕೇಂದ್ರ ಗೃಹ ಸಚಿವರು ರಾಜ್ಯದ ಅಹವಾಲನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಲಶಕ್ತಿ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಅವರು ಹೇಳಿದರು.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಸಭೆಗೆ ಹಾಜರಾಗದ ಕಾರಣ ಮೇಕೆದಾಟು ವಿಚಾರದ ಬಗ್ಗೆ ಹೆಚ್ಚಿನ ಚರ್ಚೆಗಳು ಆಗಿಲ್ಲ. ಆದರೆ ರಾಜ್ಯ ಸರ್ಕಾರ ಮೇಕೆದಾಟು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಆದಷ್ಟು ಬೇಗ ಮೇಕೆದಾಟ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಸಂಬಂಧ ದೆಹಲಿಯಲ್ಲಿ ವಕೀಲರ ಜತೆಗೂ ಚರ್ಚಿಸಿದ್ದೇನೆ ಎಂದರು.
ಮೇಕೆದಾಟು ವಿಚಾರ ಆದಷ್ಟು ಬೇಗ ಬಗೆಹರಿಯುತ್ತದೆ. ರಾಜ್ಯದ ಯಾವುದೇ ಯೋಜನೆಗಳಿಗ ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ತಮಿಳುನಾಡಿನಲ್ಲಿ ನೀರಿನ ರಾಜಕೀಯ ಮೊದಲಿನಿಂದಲೂ ಇದೆ. ನಮ್ಮ ಯೋಜನೆಗಳಿಗೆ ಅವರು ಆಕ್ಷೇಪಣೆ ಮಾಡೇ ಮಾಡುತ್ತಾರೆ. ಮೇಕೆದಾಟು ಯೋಜನೆಯ ಬಗ್ಗೆ ನ್ಯಾಯ ಸಮ್ಮತ ತೀರ್ಮಾನ ಆಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.