ಬಿಟ್ ಕಾಯಿನ್ ಎಸ್‌ಐಟಿ ಜತೆ ಡಿಜಿಪಿ ಸಭೆ

ಬೆಂಗಳೂರು,ಜು.೪- ಬಹುಕೋಟಿ ಬಿಟ್ ಕಾಯಿನ್ ಅಕ್ರಮ ಹಗರಣದ ತನಿಖೆಗೆ ನಿಯೋಜನೆಗೊಂಡಿರುವ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ವಿಶೇಷ ತಂಡ(ಎಸ್‌ಐಟಿ)ದ ಅಧಿಕಾರಿಗಳ ಜೊತೆ ಇಂದು ಸಂಜೆ ಸಿಐಡಿ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ಎಂ.ಎ.ಸಲೀಂ ಅವರು ಸಭೆ ನಡೆಸಲಿದ್ದಾರೆ.ಎಡಿಜಿಪಿ ಮನೀಶ್ ಬರ್ಡೀಕರ್, ಡಿಐಜಿ ಡಾ.ಕೆ.ವಂಶಿಕೃಷ್ಣ, ಡಿಸಿಪಿ ಡಾ.ಅನೂಪ್ ಎ. ಶೆಟ್ಟಿ ಹಾಗೂ ಸಿಐಡಿ ಎಸ್ಪಿ ಶರತ್ ಅವರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಲಿದ್ದಾರೆ.ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಸಭೆ ನಡೆಸಿದ ನಂತರ ತನಿಖೆ ವಿಧಾನ, ಆಯಾಮಗಳ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಎಸ್‌ಐಟಿಯಲ್ಲಿ ಯಾವೆಲ್ಲಾ ಇನ್ಸ್‌ಪೆಕ್ಟರ್, ಸಿಬ್ಬಂದಿ ಇರಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಸೈಬರ್ ಕ್ರೈಂ ತಜ್ಞ ಪೊಲೀಸರು, ಎಫ್‌ಎಸ್‌ಎಲ್ ತಜ್ಞರು, ಟೆಕ್ನಿಕಲ್ ನಾಲ್ಡೆಜ್ ಸಿಬ್ಬಂದಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.ನ್ಯಾಯಾಲಯದ ಅನುಮತಿ ನಂತರ ತನಿಖೆ ಬಿಟ್ ಕಾಯಿನ್ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮರು ತನಿಖೆ ನಡೆಸಲು ನಿರ್ಧಾರ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಬಳಿಕ ಸಿಸಿಬಿಯಿಂದ ಕೇಸ್ ಫೈಲ್ ಅನ್ನು ಎಸ್‌ಐಟಿ ಪಡೆಯಲಿದೆ. ಸಿಸಿಬಿ ತನಿಖಾ ವರದಿ, ಎವಿಡೆನ್ಸ್, ಆರೋಪಿ ಮತ್ತು ಸಾಕ್ಷಿಗಳ ಹೇಳಿಕೆ ಪಡೆದು ಪರಿಶೀಲನೆ ನಡೆಸಲಾಗುತ್ತದೆ.ನಂತರ ಬಿಟ್ ಕಾಯಿನ್ ಪ್ರಕರಣದ ಮರು ತನಿಖೆಯನ್ನು ಎಸ್‌ಐಟಿ ನಡೆಸಲಿದ್ದು, ಶೀಘ್ರದಲ್ಲೇ ಸಿಸಿಬಿ ತನಿಖಾ ವರದಿ ಪಡೆದು ಪರಿಶೀಲನೆ ನಡೆಸಲಿದೆ.ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಇತರರ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ೨೦೨೦ರಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಆಕ್ರಮ ಪ್ರಕರಣವನ್ನು ಎಸ್‌ಐಟಿ ಭೇದಿಸಲು ಕಾರ್ಯಪ್ರವೃತ್ತವಾಗಿದೆ.ಈ ಹಿಂದೆ ಹಗರಣದ ಕುರಿತು ಸಿಸಿಬಿ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಆದರೆ ಶ್ರೀಕಿ ಸ್ನೇಹಿತರು, ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇತರರು ಬಿಟ್ ಕಾಯಿನ್ ಹಣವನ್ನು ತಮ್ಮದಾಗಿಸಿಕೊಂಡಿರುವ ಅನುಮಾನ ಹೆಚ್ಚಿದೆ. ಇದೇ ಕಾರಣಕ್ಕೆ ಇದೀಗ ಎಸ್‌ಐಟಿ ರಚನೆ ಮಾಡಲಾಗಿದೆ.