ಬಿಟ್ ಕಾಯಿನ್ ಇಬ್ಬರು ಪೊಲೀಸ್ ಅಧಿಕಾರಿಗಳು ಕೋರ್ಟಿಗೆ ಹಾಜರು

ಬೆಂಗಳೂರು,ಜ.೨೫- ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ( ಎಸ್‌ಐಟಿ) ವಿಚಾರಣೆಗೆ ಕರೆದವರನ್ನೆಲ್ಲಾ ನಿನ್ನೆ ವಶಕ್ಕೆ ಪಡೆದಿದ್ದು, ಅವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ವಶಕ್ಕೆ ಪಡೆದಿರುವ ಇಬ್ಬರು ಅಧಿಕಾರಿಗಳಾದ
ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಅವರನ್ನು ಇಂದು ಬಂಧಿಸಲಾಗಿದ್ದು, ಮಧ್ಯಾಹ್ನ ೩ ರ ವೇಳೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ಎಸ್‌ಐಟಿ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿರಲಿಲ್ಲ. ಪ್ರಕರಣದಲ್ಲಿ ಸಾವಿರಾರು ಕೋಟಿ ರೂ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಅರೋಪ ಮಾಡಿತ್ತು. ಆದರೆ ಈಗ ತನಿಖೆ ವೇಳೆ ಕೇವಲ ಮೂರೂವರೆ ಲಕ್ಷ ರೂ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಹಿತಿ ಲಭ್ಯವಾಗಿದೆ.
ಒಂದೇ ಒಂದು ಬಿಟ್ ಕಾಯಿನ್‌ಗಳನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿಲ್ಲ. ತಾಂತ್ರಿಕ ವಸ್ತುಗಳು (ಸಾಕ್ಷಿಗಳನ್ನು ದುರುಪಯೋಗ ಮಾಡಿದ್ದಾರೆ) ಎಂಬುದು ತನಿಖೆ ವೇಳೆ ಪತ್ತೆಯಾಗಿದ್ದು ಈ ಸಂಬಂಧ ಹೆಚ್ಚಿನ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ನಿನ್ನೆ ಮಹತ್ತರ ಬೆಳವಣಿಗೆ ನಡೆದಿತ್ತು. ತನಿಖೆ ನಡೆಸುತ್ತಿರುವ ಎಸ್‌ಐಟಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಕರೆದಿದ್ದವರನ್ನೆಲ್ಲಾ ವಶಕ್ಕೆ ಪಡೆದು ತನಿಖೆ ಕೈಗೊಂಡಿತ್ತು. ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ವಶಕ್ಕೆ ಪಡೆದುಕೊಂಡವರ ವಿಚಾರಣೆ ವೇಳೆ ಏನೆಲ್ಲಾ ಮಾಹಿತಿ ಹೊರಬರುತ್ತೆ ಆಗ ಎಸ್‌ಐಟಿಯ ಮುಂದಿನ ನಡೆಯೇನು ಎನ್ನುವುದೇ ಕುತೂಹಲ ಮೂಡಿಸಿದೆ.
ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿತ್ತು. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್‌ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ.
ಇನ್ನು ಈ ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರುಗಳ ಹೆಸರುಗಳು ಕೇಳಿಬಂದಿದ್ದವು. ಇದರಿಂದ ಈ ಬಿಟ್? ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಎಸ್‌ಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ತನಿಖೆಯಲ್ಲಿ ಏನೆಲ್ಲ ಅಂಶಗಳು ಬೆಳಕಿಗೆ ಬರಲಿವೆ ಎನ್ನುವುದನ್ನು ಕಾದುನೋಡಬೇಕಿದೆ.