ಬಿಟ್ಟಿ ಯೋಜನೆಗಳಿಗೆ ಹಣಕಾಸು ಹೇಗೆ ಕೊಡುತ್ತೀರಿ ತಿಳಿಸಿ: ಕರಂದ್ಲಾಜೆ

ಮೈಸೂರು: ಬಿಟ್ಟಿ ಯೋಜನೆಗಳಿಗೆ ಹಣಕಾಸನ್ನು ಹೇಗೆ ಹೊಂದಿಸಿಕೊಳ್ಳಲಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಜನರಿಗೆ ತಿಳಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ತೆರಿಗೆ ವಿಧಿಸುತ್ತೀರಾ ಅಥವಾ ಸಾಲದ ಮೇಲೆ ಸಾಲ ಮಾಡುತ್ತೀರಾ ಎಂಬುದನ್ನು ಮೊದಲು ಹೇಳಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು ಬಹಳ ಖುಷಿಯಿಂದ ಬಸ್‍ಗಳಲ್ಲಿ ಓಡಾಡುತ್ತಿz?ದÁರೆ. ಆದರೆ ಇದರಿಂದ ಕೆಎಸ್‍ಆರ್‍ಟಿಸಿಗೆ ಆಗುವ ನಷ್ಟವನ್ನು ಸರ್ಕಾರ ಹೇಗೆ ಭರಿಸುತ್ತದೆ ಎಂದು ಪಶ್ನಿಸಿದರು.
ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ, ನಮ್ಮ ರಾಜ್ಯ ಒಟ್ಟು ಎಷ್ಟು ಸಾಲದಲ್ಲಿದೆ, ಆ ಸಾಲಕ್ಕೆ ಪ್ರತಿವರ್ಷ ಎಷ್ಟು ಬಡ್ಡಿ ಕಟ್ಟಬೇಕು? ಇದೆಲ್ಲವನ್ನೂ ಆಲೋಚನೆ ಮಾಡಿ ಯಾವುದೇ ರಾಜ್ಯ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಬೇಕು. ಆದರೆ ಈ ಬಗ್ಗೆ ಗಮನಹರಿಸದೆ ಕಾಂಗ್ರೆಸ್ ಬಹಳ ಧೈರ್ಯದಿಂದ ಗ್ಯಾರಂಟಿ ಘೋಷಣೆ ಮಾಡಿದೆ. ಚುನಾವಣೆ ಸಂದರ್ಭ ಗ್ಯಾರಂಟಿಗಳಿಗೆ ಯಾವುದೇ ಕಂಡಿಷನ್ ಇರಲಿಲ್ಲ. ಆದರೆ ಇದೀಗ ಎಲ್ಲ ಕಂಡಿಷನ್‍ಗಳನ್ನು ವಿಧಿಸುತ್ತಿದ್ದಾರೆ. 200 ಯೂನಿಟ್‍ವರೆಗೆ ವಿದ್ಯುತ್ ಉಚಿತವೆಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆ ಮಾಡಿದೆ. ಒಂದೆಡೆ ಉಚಿತ ವಿದ್ಯುತ್ ನೀಡಿ, ಮತ್ತೊಂದೆಡೆ ಜನರಿಂದ ಹಣ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ವಿರೋಧಿಸುವವರು ಮನುವಾದಿಗಳು ಎಂಬ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಎಲ್ಲವನ್ನೂ ಕೇಂದ್ರದ ಮೇಲೆ ಹಾಕಿ ಕೈತೊಳೆದುಕೊಳ್ಳುವ ಆಲೋಚನೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದರೆ ಅದಕ್ಕೆ ಜನರು ಉತ್ತರಿಸುತ್ತಾರೆ ಎಂದರು.
ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ
ದೇಶದಲ್ಲಿ ಮುಂಗಾರು ಬಹಳ ಬೇಗ ಆರಂಭವಾಗಬೇಕಿತ್ತು. ಆದರೆ ಈ ಬಾರಿ ತಡವಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸುತ್ತಿದೆ. ದೇಶದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಬಿತ್ತನೆ ಬೀಜ ಬೇಕು, ಎಷ್ಟು ರಸಗೊಬ್ಬರ ಬೇಕು ಎಂಬ ಮಾಹಿತಿ ಪಡೆಯಲಾಗುತ್ತಿದೆ. ಈ ಬಾರಿಯೂ ಮುಂಗಾರಿಗೆ ಮುನ್ನ ರಾಜ್ಯ ಕೃಷಿ ಇಲಾಖೆ ಜತೆ ಸಭೆ ನಡೆಸಲಾಗುವುದು. ಸದ್ಯಕ್ಕೆ ದೇಶದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಕಂಡುಬಂದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪ್ರತಿಯೊಬ್ಬರೂ ದೇಶಕ್ಕೋಸ್ಕರ ದುಡಿಯಬೇಕು
ನರೇಂದ್ರ ಮೋದಿ ಅವರಂತೆ ನಾವೆಲ್ಲರೂ ದೇಶಕ್ಕೋಸ್ಕರ ದುಡಿಯಬೇಕು. ತಮಗೋಸ್ಕರ ಪ್ರತಿಯೊಬ್ಬರೂ ದುಡಿಯುತ್ತಾರೆ. ಇದರ ಜತೆಗೆ, ದೇಶದ ನಿರ್ಮಾಣಕ್ಕೂ ದುಡಿಯಬೇಕು. ಹಾಗಿದ್ದಲ್ಲಿ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ನರೇಂದ್ರ ಮೋದಿ ನುಡಿದಂತೆ ನಡೆಯುವವರು. ಅವರು ಪ್ರಧಾನಿಯಾದ ನಂತರ ದೇಶದ ಅಭಿವೃದ್ಧಿಗೆ ವೇಗ ದೊರೆತಿದೆ. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಿ ತಮ್ಮ ಅವಧಿಯಲ್ಲಿಯೇ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಭಾರತವನ್ನು ಬಡರಾಷ್ಟ್ರ, ಹಾವಾಡಿಗರ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು. ನಮ್ಮನ್ನು ವಿದೇಶಿಯರು ನೋಡುವ ದೃಷ್ಟಿಕೋನವೇ ಬೇರೆ ಇತ್ತು. ಆದರೆ, ಇದೀಗ ವಿಶ್ವದ ಎಲ್ಲ ಭಾಗಗಳಲ್ಲೂ ದೇಶಕ್ಕೆ ಗೌರವ ದೊರೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದರು.