
ಕಲಬುರಗಿ,ಜು.1: ರಾಜ್ಯ ಸಂಜೀವಿನಿ ನೌಕರರಿಗೆಬಿಟ್ಟಿ ಚಾಕರಿ ತೊಲಗಿಸಿ, ಸಮಾನ ವೇತನ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಸಲಹೆಗಾರರಾದ ಶ್ರೀಮತಿ ಕೆ. ನೀಲಾ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಶನಿವಾರ ಸಲ್ಲಿಸಿದರು.
ನಿಯೋಗದ ನೇತೃತ್ವ ವಹಿಸಿ ಮನವಿ ಸಲ್ಲಿಸಿದ ಅವರು, ಕಳೆದ ಎರಡು ವರ್ಷಗಳಿಂದ ಸಂಘವು ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯಗಳನ್ನು ಮಂಡಿಸುತ್ತ ಬಂದಿದೆ. ಕಳೆದ ಫೆಬ್ರವರಿ 13ರಂದು ವಿಧಾನಸೌಧದೆದುರು 2000ಕ್ಕೂ ಅಧಿಕ ನೌಕರರಿಂದ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಆ ದಿನ ಮನವಿ ಸ್ವೀಕರಿಸಿದ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಸಪಕ ನಿರ್ದೇಶಕರು ಹಲವು ಕ್ರಮಗಳ ಜಾರಿಯ ಕುರಿತು ಪ್ರಸ್ತಾಪಿಸಿದ್ದರು. ಆದರೂ ಅವುಗಳು ಇದುವರೆಗೆ ಜಾರಿಗೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಸಬಲೀಕರಣದ ಸಂಜೀವಿನಿ ಯೋಜನೆಯ ಜಾರಿಗಾಗಿ ಕಾರ್ಯ ನಿರ್ವಹಿಸುವ ನೌಕರರು ಮತ್ತು ಫಲಾನುಭವಿಗಳು ಮಹಿಳಾ ಸಬಲೀಕರಣದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಹರ್ನಿಸಿ ದುಡಿಯುತ್ತಿದ್ದಾರೆ. ಮುಖ್ಯವಾಗಿ, ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು ಮತ್ತು ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಮಹಿಳಾ ಒಕ್ಕೂಟದ ಮುಖ್ಯ ಕಾರ್ಯಕರ್ತರಾಗಿ ಸೇವೆಯಲ್ಲಿರುವ ಅವರಿಗೆ ಸರ್ಕಾರದಿಂದ ಯಾವುದೇ ವೇತನಗಳಿಲ್ಲದೇ ಗೌರವಧನವೆಂಬ ಅಣಕದ ವೇತನಕ್ಕೆ ದುಡಿಯುವ ದುರ್ಬರ ಪರಿಸ್ಥಿತಿ ಒದಗಿದೆ. ಬೆಳಗಿನಿಂದ ಸಂಜೆಯತನಕ ಕಾರ್ಯ ನಿರ್ವಹಿಸುತ್ತಿರುವ ಕೆಲಸವು ಬಿಟ್ಟಿ ಚಾಕರಿಯಾಗಿದೆ. ನಾಲ್ಕು ಗೋಡೆಯೊಳಗೆ ದುಡಿಯುವ ಬಿಟ್ಡಿ ಚಾಕರಿಯ ಬಂಧನದಿಂದ ಹೊರಬಂದು ಮುಖ್ಯವಾಹಿನಿಯ ದುಡಿಮೆಯಲ್ಲಿ ತೊಡಗಿಸಿಕೊಂಡರೂ, ಸರಕಾರವೇ ಗೌರವ ವೇತನವೆಂದು ನವ ನಾಮಕರಣದ ಬಿಟ್ಟಿ ಚಾಕರಿಯಲ್ಲಿ ತೊಡಗಿಸಿರುವುದು ವಿಷಾದನೀಯವಾಗಿದೆ. ಅದನ್ನು ಈ ಕೂಡಲೇ ತಡೆದು ಅವರಿಗೆ ವೇತನವನ್ನು ನಿಗದಿಸಬೇಕು ಎಂದು ಅವರು ಒತ್ತಾಯಿಸಿದರು.
ಪುರುಷ ಪ್ರಧಾನ ಸಮಾಜದಂತೆಯೇ ಸರ್ಕಾರವು ಸಂಜೀವಿನಿ ನೌಕರರಿಗೆ ನಡೆಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹಿಳಾ ಸಬಲೀಕರಣದ ನೀತಿಯೂ ಕೂಡಾ, ಲೂಟಿಕೋರ ಕಾಪೆರ್Çೀರೇಟ್ ಕಂಪನಿಗಳ ಪರವಾದ ಆರ್ಥಿಕ ನೀತಿಗಳನ್ನು ಬಲವಾಗಿ ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ, ಅದು ಸಬಲೀಕರಣಗೊಳಿಸದೇ ಮಹಿಳೆಯರ ಮೇಲೆ ಮತ್ತಷ್ಟು ಹೊರೆ ಹಾಗೂ ದೌರ್ಜನ್ಯಗಳನ್ನು ಹೆಚ್ಚಿಸುತ್ತಿದೆ. ಈಚೆಗೆ ಸರ್ಕಾರ ಮಹಿಳೆಯರ ವಿಚಾರದಲ್ಲಿ ಇಟ್ಟ ಹೆಜ್ಜೆಯು ಸ್ವಾಗತಾರ್ಹವಾಗಿದೆ. ಆದರೇ, ಜನ ಸಂಖ್ಯೆಯ ಅರ್ದಭಾಗ ಮಹಿಳೆಯರಿದ್ದರೂ, ಬಜೆಟ್ ನಲ್ಲಿ ನ್ಯಾಯವಾಗಿ ಅರ್ಧದಷ್ಠು ಅನುದಾನ ಒದಗಿಸದಿರುವುದು ಇದುವರೆಗಿನ ಒಟ್ಟು ಸಮಸ್ಯೆಗಳ ಪ್ರಮುಖ ಮೂಲವಾಗಿದೆ.ಆ ನೆಲೆಯಲ್ಲಿ ಮಹಿಳಾ ಸಬಲೀಕರಣ ಬಲಗೊಳಿಸಲು ಹಾಗೂ ಅಲ್ಲಿ ದುಡಿಯುವವರಿಗೆ ನೆರವಾಗಬೇಕು ಎಂದು ಅವರು ಆಗ್ರಹಿಸಿದರು.
ಈ ಕೂಡಲೇ ಸಂಜೀವಿನಿ ನೌಕರರಿಗೆ ನೇಮಕಾತಿಯ ಆದೇಶವನ್ನು ತಕ್ಷಣವೇ ಎಲ್ಲ ನೌಕರರಿಗೆ ಒದಗಿಸುವಂತೆ, ಕಳೆದ ಹಲವಾರು ತಿಂಗಳುಗಳಿಂದ ಉಳಿಸಿಕೊಂಡಿರುವ ಬಾಕಿ ಗೌರವಧನ ಅಥವಾ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮತ್ತು ನಮ್ಮಗಳ ವೇತನವನ್ನು ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ, ಅದಾಗಲೇ ಮೂರು ನಾಲ್ಕು ಬಾರಿ ಒಂದು ವಾರ ಕಾಲ, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ನಾವುಗಳು ಗಣತಿ ಕಾರ್ಯದಲ್ಲಿ ತೊಡಗಿದ್ದರೂ ಯಾವುದೇ ಭತ್ಯೆಯನ್ನು ನೀಡಿರುವುದಿಲ್ಲ. ಕಾರಣವೂ ತಿಳಿದಿಲ್ಲ. ದಿನ ಭತ್ಯೆ 500 ರೂ.ಗಳಂತೆ ಗಣತಿ ಕಾರ್ಯದ ಎಲ್ಲಾ ದಿನಗಳಿಗೆ ತಕ್ಷಣವೇ ಹಣವನ್ನ ಬಿಡುಗಡೆ ಮಾಡಬೇಕು. ಬಿಡುಗಡೆಯಾಗಿದ್ದರೂ ನೀಡದಿರುವ ಸಂಬಂದಿಸಿದವರ ಮೇಲೆ ಕ್ರಮವಹಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯದಾದ್ಯಂತ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಶೌಚಾಲಯ ಹಾಗೂ ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಚೇರಿಗಳನ್ನು ಒದಗಿಸುವಂತೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರ ವೇತನ 15,000 ರೂ.ಗಳಿಗೆ ಮತ್ತು ಸಂಪನ್ಮೂಲ ಸಹಾಯಕರಿಗೆ ಕನಿಷ್ಠ 13,000 ರೂ.ಗಳು, ವಿವಿಧ ಸಖಿ ಕಾರ್ಯಕರ್ತರಿಗೆ 8,000 ರೂ.ಗಳ ವೇತನವನ್ನು ಹೆಚ್ಚಿಸುವಂತೆ, ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಮತ್ತು ಮೊಬೈಲ್ ಗಳು ಹಾಗೂ ಅವುಗಳಿಗೆ ಅಗತ್ಯವಾದ ಉಚಿತ ಕರೆನ್ಸಿ ಒದಗಿಸಬೇಕು. ಅದೇ ರೀತಿ ಭವಿಷ್ಯ ನಿಧಿ ಯೋಜನೆಯನ್ನು ಹಾಗು ಇಎಎಸ್‍ಐ ಸೌಲಭ್ಯ ಜಾರಿಗೊಳಿಸುವಂತೆ, ಉಚಿತ ವಿಮಾ ಸೌಲಭ್ಯ ಒದಗಿಸುವಂತೆ ಅವರು ಆಗ್ರಹಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟಗಳ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಪುಸ್ತಕ ಬರಹಗಾರರು ಮತ್ತು ಮಹಿಳೆಯರ ನಡುವೆ ನೇರ ಕಾರ್ಯ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿ ಸಹಾಯಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ವೇತನವನ್ನು ನಿಗದಿಗೊಳಿಸುವಂತೆ, ಅಲ್ಲಿಯವರೆಗೆ ಕನಿಷ್ಠ ವೇತನ ಒದಗಿಸುವಂತೆ, ಮಹಿಳಾ ಒಕ್ಕೂಟದ ಹಾಗೂ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಾಸಿಕ ಪೆÇ್ರೀತ್ಸಾಹ ಧನವನ್ನು ತಲಾ 2,000 ರೂ.ಗಳನ್ನು ನೀಡುವಂತೆ, ಸ್ವ ಸಹಾಯಗುಂಪುಗಳಿಗೆ ಅವಶ್ಯ ವಿರುವಷ್ಠು ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ಒದಗಿಸುವಂತೆ ಅವರು ಒತ್ತಾಯಿಸಿದರು.
ಕಚೇರಿಗಳಲ್ಲಿ ಶೌಚಾಲಯ ಸೌಲಭ್ಯ ಹಾಗೂ ಅಗತ್ಯ ಪೀಠೋಪಕರಣಗಳು ಮತ್ತು ಗಣಕಯಂತ್ರಗಳನ್ನು ಒದಗಿಸುವಂತೆ, ಮಹಿಳೆಯರ ಜನ ಸಂಖ್ಯೆಗನುಗುಣವಾಗಿ ಬಜೆಟ್ ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಗಂಡ ಸತ್ತ ಮಹಿಳೆಯರು, ಪರಿತ್ಯಕ್ತ ಮಹಿಳೆಯರು, ಅಂಗವಿಕಲ ಮಹಿಳೆಯರುಗಳಿಗೆ ಕನಿಷ್ಟ ಮಾಸಿಕ 5,000 ರೂ.ಗಳ ನೆರವು ನೀಡಬೇಕು. ಪತಿ ಸತ್ತ ಹಾಗೂ ಅಂಗವಿಕಲ ಮತ್ತು ದೇವದಾಸಿ ಯುವ ಮಹಿಳೆಯರ ಮರು ಮದುವೆಗೆ ಪೆÇ್ರೀತ್ಸಾಹ ಧನವನ್ನು ಒದಗಿಸುವಂತೆ, ಪ್ರತಿಯೊಬ್ಬರಿಗೂ ನಿವೇಶನ ಸಹಿತ ಉಚಿತ ಮನೆಯನ್ನು, ಸರ್ಕಾರಿ ನೌಕರಿಗಳಲ್ಲಿ ಆಧ್ಯತೆ ಮೇರೆಗೆ ನೌಕರಿ ಒದಗಿಸುವಂತೆ ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷೆ ಶಾಂತಾ ಘಂಟಿ, ಜಿಲ್ಲಾಧ್ಯಕ್ಷೆ ನಂದಾದೇವಿ ಮಂಗೊಂಡಿ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮುಂತಾದವರು ಉಪಸ್ಥಿರರಿದ್ದರು.