(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31: ತಾಲೂಕಿನ ಕುಡಿತಿನಿ ಹತ್ತಿರದ ಬಿಟಿಪಿಎಸ್ ಬಳಿ ಇಂದು
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನ 54ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯ್ತು.
ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಳಿಮಠ ಧ್ವಜಾರೋಹಣ ನೆರವೇರಿಸಿದರು. ನಂತರ ಅಗಲಿದ ಹಿರಿಯ ಸಂಗಾತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಹಿರಂಗ ಸಭೆ ನಡೆಸಲಾಯಿತು.
ಮುಖ್ಯ ಅಥಿತಿಗಳಾಗಿ ಮಾತನಾಡಿದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಎಮ್.ಚನ್ನಬಸಯ್ಯ, ಬೆಲೆ ಏರಿಕೆ, ನಿರುದ್ಯೋಗ, ಜನರ ಆದಾಯ ಕುಸಿತದಿಂದಾಗಿ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರ್ಮಿಕ ಕಾನೂನು ತಿದ್ದುಪಡಿಯಿಂದ ಕೋಟ್ಯಂತರ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ರೈಲು, ವಿದ್ಯುತ್, ವಿಮಾನ, ವಿಮೆ ಮುಂತಾದ ಲಾಭದಾಯಕ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ಉಂಟಾಗಿದೆ. ರೈತ, ಕಾರ್ಮಿಕ ಮಧ್ಯಮ ಹಾಗೂ ಬಡ ವರ್ಗದರ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಎಲ್ಲಾ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ನಡೆಸಲಾಗುತ್ತಿದೆ ಎಂದರು.
ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡರಾದ ಮಲಿಯಪ್ಪ, ರುದ್ರಮ್ಮ, ಜಗದೀಶ, ಗಾದಿಲಿಂಗಮ್ಮ, ಹುಚ್ಚಮ್ಮ, ನಳನಿ, ಪಾಂಡು, ಅಂಜಿನಪ್ಪ, ಮುಂತಾದವರು ಭಾಗವಹಿಸಿದ್ದರು.