ಬಿಜೆಪಿ ಹೇಳಿಕೆ ಹಾಸ್ಯಾಸ್ಪದ

ನವದೆಹಲಿ, ಆ.೩೧- ಸಹೋದರ ರಾಹುಲ್ ಗಾಂಧಿ ಮತ್ತು ನನ್ನ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ಬಿಜೆಪಿಯ ಹೇಳಿಕೆ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಸಂಘರ್ಷ ನಡೆಯುತ್ತಿದೆ ಎಂಬುದಾಗಿ ಬಿಜೆಪಿಯ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ನೀಡಿರುವ ಹೇಳಿಕೆಗೆ ಪ್ರಿಯಾಂಕಾ ಟ್ವಿಟರ್ ನಲ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ಮತ್ತು ನನ್ನ ಸಹೋದರ ಜೊತೆಯಾಗಿ ಬಿಜೆಪಿಯ ”ಸುಳ್ಳುಗಳು, ಲೂಟಿ ಮತ್ತು ಅಪಪ್ರಚಾರವನ್ನು” ನಿಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ನಡುವಿನ ”ರಾಜಕೀಯ ಸಂಘರ್ಷ”ದ ಬಗ್ಗೆ ಮಾತನಾಡುವ ವೀಡಿಯೊವೊಂದನ್ನೂ ಅಮಿತ್ ಮಾಳವೀಯ ಟ್ವಿಟರ್ ನಲ್ಲಿ ಹಾಕಿದ್ದರು. ಬಿಜೆಪಿ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ಬಿಜೆಪಿಯವರೇ, ಇಂದಿನ ಬೆಲೆಯೇರಿಕೆ ಮತ್ತು ನಿರುದ್ಯೋಗದ ಕಾಲದಲ್ಲಿ ನಿಮ್ಮಲ್ಲಿ ಈ ಅಸಂಬದ್ಧ ವಿಷಯ ಬಿಟ್ಟು ಬೇರೇನೂ ಇಲ್ಲವೇ ಕ್ಷಮಿಸಿ, ನಿಮ್ಮ ಈ ಕ್ಷುಲ್ಲಕ ಮನಸ್ಸಿನ ಕಲ್ಪನೆ ಯಾವತ್ತೂ ನಿಜವಾಗುವುದಿಲ್ಲ. ನನ್ನ ಮತ್ತು ನನ್ನ ಸಹೋದರನ ನಡುವೆ ಇರುವುದು ಪರಸ್ಪರ ಪ್ರೀತಿ, ನಂಬಿಕೆ, ಗೌರವ ಮತ್ತು ನಿಷ್ಠೆ ಮಾತ್ರ” ಎಂದು ಹೇಳಿದ್ದಾರೆ.