ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರ ಹಿಡಿಯಲಿದೆ: ವಿ.ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ, ಮೇ.08:- ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇನ್ನೂ ಅಧಿಕಾರದ ಅಮಲು ಇಳಿದಿಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬರೀ ಮಜಾ ಮಾಡಿದರು. ಈಗ, ಮತ್ತೆ ನಾನು ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಇವರು ಮುಖ್ಯಮಂತ್ರಿ ಆಗಿ ಸೋಲಲಿಲ್ಲವೇ, ಇವರ ಜೊತೆಗೆ ಎಚ್.ಸಿ. ಮಹಾದೇವಪ್ಪ ಸೋಲಲಿಲ್ಲವೇ ಎಂದು ಟೀಕಿಸಿದರು.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದು ನಾನು. ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ. ಪರಮೇಶ್ವರ್ ಸೋತಿದ್ದರಿಂದ ಮತ್ತು ಖರ್ಗೆ ಅವರು ದೆಹಲಿ ರಾಜಕಾರಣಕ್ಕೆ ಹೋಗಿದ್ದರಿಂದ ಬೆಂಬಲ ನೀಡಿ ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದೆವು. ಆದರೆ, ಸಚಿವ ಸಂಪುಟ ಪುನರ್ ರಚನೆ ನೆಪದಲ್ಲಿ ನನ್ನನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಿ ಮನಸ್ಸು ಘಾಸಿ ಗೊಳಿಸಿದರು. ನಂಜನಗೂಡು ಉಪ ಚುನಾವಣೆಯಲ್ಲಿ ಹಣ ಬಲ, ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನನ್ನು ಸೋಲಿಸಲಾಯಿತು. ಆದರು ಸಹ ನಾನು ಧೃತಿಗೆಡಲಿಲ್ಲ. ನಂತರ 2013ರ ಚುನಾವಣೆಯಲ್ಲಿ ಚಾಮುಂಡೇಶ್ವರ ಕ್ಷೇತ್ರದಲ್ಲಿ 35 ಸಾವಿರ ಅಂತರದಲ್ಲಿ ಸೋಲಿಸಿದೆ. ನಂಜನಗೂಡು ಕ್ಷೇತ್ರದಿಂದ ನನ್ನ ಅಳಿಯ ಹರ್ಷವರ್ಧನನ್ನು 10 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದೆ. ನಂತರ ಬಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೇ ಮಾಡಿ, ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಮೋದಿ ಬಗ್ಗೆ ನಿಮ್ಮ ಅಹಂ ಭಾಷಣದಿಂದ ಕೇವಲ 1 ಸ್ಥಾನವನ್ನು ಮಾತ್ರ ಗೆಲ್ಲಲಾಯಿತು. ಇನ್ನುಳಿದ 25 ಸ್ಥಾನಗಳು ಸಹ ಬಿಜೆಪಿ ಪಾಲಾಯಿತು. ಇದು ಸೋಲಲ್ಲವೇ ಎಂದು ಛೇಡಿಸಿದರು.
ಸಿದ್ದರಾಮಯ್ಯ ಯಾವುದೇ ಹೋರಾಟ ಮಾಡದ ವ್ಯಕ್ತಿ. ಹೋರಾಟದ ಹಿನ್ನೆಲೆ ಇಲ್ಲದೇ ಅಧಿಕಾರ ಅನುಭವಿಸಿದವರು. 1980ರಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ನಾನು ಗೆದ್ದಿದ್ದೆ. ಸಿದ್ದರಾಮಯ್ಯ ಮೈಸೂರಿನಲ್ಲಿ 8 ಸಾವಿರ ಮತ ಪಡೆದು ಸೋತಿದ್ದರು. ಚುನಾವಣೆಗೆ ನಿಲ್ಲುವುದು ಅವರಿಗೆ ಒಂದು ರೀತಿ ತೆವಲು. ಸಿದ್ದರಾಮಯ್ಯಗೆ ಮಜಾ ಮಾಡಲು ಮುಖ್ಯಮಂತ್ರಿ ಸ್ಥಾನಬೇಕಾಗಿದೆ. ಜನರ ಕಲ್ಯಾಣಕ್ಕಾಗಿ ಅಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಜೆಡಿಎಸ್‍ನದ್ದು ನವರತ್ನ ಕಾರ್ಯಕ್ರಮ:
ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್‍ನವರು ಪಂಚರತ್ನ ಕಾರ್ಯಕ್ರಮ ಎನ್ನುತ್ತಿದ್ದಾರೆ. ಆದರೆ ಅದು ಪಂಚರತ್ನವಲ್ಲ. ಅವರ ಕುಟುಂಬಸ್ಥರೇ ಇರುವ ಅಷ್ಟರತ್ನ ಕಾರ್ಯಕ್ರಮ. ಅಧ್ಯಕ್ಷ ಸಿ.ಎಂ ಇಬ್ರಾಹಿಂ ಸೇರಿ ನವರತ್ನ ಆಗಿದೆ. ಯಾವುದೇ ಚುನಾವಣೆ ಬಂದರೂ ಮನೆಯವರಿಗೇ ಎನ್ನುತ್ತಾರೆ. ಜೆಡಿಎಸ್ ಬಗ್ಗೆ ಮಾತನಾಡುವುದು ಅನಗತ್ಯ ಎಂದು ಹೇಳಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅತ್ಯದ್ಭುತವಾಗಿ ಸರ್ಕಾರ ಮಾಡಿದ್ದಾರೆ. ಸೋಮಣ್ಣ ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಈ ಬಾರಿ ಗೆಲ್ಲುತ್ತಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜನಗರ ಅಭಿವೃದ್ದಿಯತ್ತ ನನ್ನ ಚಿತ್ತ : ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ನನ್ನ ಮಗನನ್ನು ಶಾಸಕನಾಗಿಸಲು ನಾನು ಇಲ್ಲಿಗೆ ಬಂದಿಲ್ಲ. ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ಚಾಮರಾಜನಗರದಲ್ಲಿ ಮನೆ ಮಾಡಿದ್ದೇನೆ. 24×7 ಕೆಲಸ ಮಾಡುತ್ತೇನೆ. ನನ್ನ ಚಿತ್ತ ಚಾಮರಾಜನಗರವನ್ನು ಮತ್ತೊಂದು ಗೋವಿಂದರಾಜನಗರವನ್ನಾಗಿ ಮಾಡುವುದಾಗಿ ಆಗಿದೆ. ಈಗಾಗಲೇ ನನ್ನ ಮತ ಚಾಮರಾಜನಗರ ಕ್ಷೇತ್ರದಲ್ಲಿದೆ. ನನ್ನ ಪತ್ನಿಯು ಸಹ ಈ ಕ್ಷೇತ್ರದ ಮತದಾರರಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್ ಹಾಜರಿದ್ದರು.