ಬಿಜೆಪಿ ಸ್ಲಂ ಮೋರ್ಚಾದಿಂದ ಪೋಲಿಸ್ ಠಾಣೆಗಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ

ಮಹದೇವಪುರ, ಜ. ೫. ಕೊರೊನಾ ವಾರಿಯರ್ಸ್‌ಗಳ ಸುರಕ್ಷತೆಗಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ ವಿತರಣೆ ಮಾಡಲಾಯಿತು ಎಂದು ಮಹದೇವಪುರ ನಗರ ಮಂಡಲ ಸ್ಲಂ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಯಾದವ್ ತಿಳಿಸಿದರು.
ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಮಾರ್ಗದರ್ಶನದಲ್ಲಿ ಇಂದು ವೈಟ್ ಫೀಲ್ಡ್ ಎ.ಸಿ.ಪಿ. ಎಂ.ಇ.ಮನೋಜ್ ಕುಮಾರ್ ಮತ್ತು ಮಹದೇವಪುರ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜನರ ಸುರಕ್ಷತಾ ದೃಷ್ಟಿಯಿಂದ ಎಲ್ಲರಿಗೂ ಉಚಿತವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದರು. ಸಾಂಕೇತಿಕವಾಗಿ ವೈಟ್ ಫೀಲ್ಡ್ ವಿಭಾಗದ ಪೋಲಿಸ್ ಠಾಣೆಗಳಾದ ವೈಟ್ ಫೀಲ್ಡ್ ಡಿ.ಸಿ.ಪಿ.ಕಛೇರಿ, ಕಾಡುಗುಡಿ ಟ್ರಾಫಿಕ್ ಪೋಲಿಸ್ ಠಾಣೆ, ಕೆ.ಆರ್.ಪುರ ಪೋಲಿಸ್ ಠಾಣೆ ಹಾಗು ಮಹದೇವಪುರ ಪೋಲಿಸ್ ಠಾಣೆಗಳಲ್ಲಿ ವಿತರಣೆ ಮಾಡಲಾಗಿದೆ ಎಂದರು. ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಸ್ಲಂ ಮೋರ್ಚಾ ವತಿಯಿಂದ ಸ್ಯಾನಿಟೈಸರ್ ಹಾಗು ಮಾಸ್ಕ್ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹದೇವಪುರ ನಗರ ಮಂಡಲ ಅದ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ಶಿವಣ್ಣ, ಅಂಬರೀಶ್, ರವಿಚಂದ್ರ, ರಘು, ಬಿ.ಶಂಕರ್ ಹಾಜರಿದ್ದರು.