ಬಿಜೆಪಿ ಸೋಲಿಗೆ ತಪ್ಪು ನಿರ್ಧಾರಗಳೇ ಕಾರಣ: ಜನಾರ್ಧನ ರಡ್ಡಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.14: ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಜನರು ನನಗೆ ಆಶಿರ್ವಾಧ ಮಾಡಿದ್ದಾರೆ ಅವರಿಗೆ ನಾನು ಚಿರಋಣಿಯಾಗಿರುತ್ತೆನೆ. ಕಾಂಗ್ರೆಸ್ ಬಹುಮತ ಪಡೆದುಕೊಂಡಿದ್ದು, ಬಿಜೆಪಿ ಸೋಲಿಗೆ ಹೈಕಮಾಂಡನಿ ತಪ್ಪು ನಿರ್ಧಾರಗಳೇ ಕಾರಣವಾಗಿದೆ ಎಂದು ಗಂಗಾವತಿಯಿಂದ ಆಯ್ಕೆಯಾದ ಗಾಲಿ ಜರ್ನಾಧನ ರಡ್ಡಿ ಹೇಳಿದರು.
ಮತೆಣಿಕೆ ಕೇಂದ್ರದಿಂದ ಜಯದ ಸಂಭ್ರಮಾಚರಣೆ ನಂತರ ಮಾದ್ಯಮದವರೊಂದಿಗೆ ಮಾತನಾಡಿ, ನಾಲ್ಕು ತಿಂಗಳಲ್ಲಿ ಗಂಗಾವತಿ ಜನರು ತೋರಿಸಿದ ಪ್ರೀತಿ ವಿಶ್ವಾಸವೇ ನನ್ನ ಗೆಲುವಿಗೆ ಸಹಕಾರವಾಗಿದೆ. ನಮ್ಮ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ಶ್ರಮಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದು ಬಹುಮತವನ್ನು ಪಡೆದುಕೊಂಡಿದೆ. ಬಿಜೆಪಿ ಹಿನಾಯ ಸೋಲಿಗೆ ಹೈಕಮಾಂಡ್ ನ ತಪ್ಪು ನಿರ್ಧಾರಗಳು ಮತ್ತು ದುರಂಕಾರಕ್ಕೆ ತಕ್ಕ ಉತ್ತರ ಮತದಾರರು ನೀಡಿದ್ದಾರೆ. ಹಲವು ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಕಣ್ಣಿರು ಹಾಕಿಸಿ ಕೆಳಗಿಳಿಸಿದ್ದಾರೆ. ಇಂತಹ ನಾಯಕರು ಬಿಜೆಪಿಯಲ್ಲಿ ಸ್ಥಾನಮಾನ ನೀಡದ್ದಿದ್ದಕ್ಕೆ ಈ ಸೋಲಿಗೆ ಕಾರಣವಾಗಿದೆ ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತ ನೀಡುವ ನೀರಿಕ್ಷೆ ಇದ್ದು, ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ಇದೆ ಎಂದರು.
ಪಡೆದ ಮತಗಳು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜನಾರ್ಧನ ರಡ್ಡಿ 66219, ಕಾಂಗ್ರಸ್ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 57947 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.  ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ 29167  ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಗಾಲಿ ಜರ್ನಾಧನ ರಡ್ಡಿ 8266 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಸ್ತೆ ಮೂಲಕ ಮೆರವಣಿಗೆ: ವಿಧಾನಸಭಾ ಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ಜನಾರ್ಧನ ರೆಡ್ಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೇಮಗುಡ್ಡ ಶ್ರೀ ದುರ್ಗಾದೇವಿ ದರ್ಶನ ಪಡೆದು ನಂತರ ಚಿಕ್ಕಬೆಣಕಲ್, ದಾಸನಾಳ, ಬಸಾಪಟ್ಟಣ, ವಡ್ಡರಹಟ್ಟಿ ಮೂಲಕ ಗಂಗಾವತಿ ನಗರದಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ದಾರಿಯೂದ್ದಕ್ಕೂ ಕಾರ್ಯಕರ್ತರು ಹೂ ಮಳೆ, ಪಟಾಕಿ ಸಿಡಿಸಿ, ಬಣ್ಣ ಹಾಕಿ  ಭರ್ಜರಿ ಸ್ವಾಗತ ಕೋರಿದರು. ಸಾವಿರಕ್ಕೂ ಹೆಚ್ಚು ಬೈಕ್ ಹಾಗೂ ಕಾರಗಳ ರ್ಯಾಲಿಯಲ್ಲಿ ಆಗಮಿಸಿದ್ದರಿಂದ ಬಸಾಪಟ್ಟಣ ದಿಂದ ಗಂಗಾವತಿವರೆಗೂ ಮುಖ್ಯ ರಸ್ತೆ ಟ್ರಾಫೀಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದರು. ಈ ವೇಳೆ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ನಗರ ಘಟಕದ ಅಧ್ಯಕ್ಷ ವಿರೇಶ ಬಲ್ಕುಂದಿ, ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ನಗರಸಭೆ ಮಾಜಿ ಸದಸ್ಯರಾದ, ಬಿ.ನಾಗರಾಜ, ಪ್ರಮುಖರಾದ ಎಂ.ಡಿ ಉಸ್ಮಾನ್ ಸಾಬ, ನಾಗರಾಜ ಚಳ್ಳಿಗೇರಿ ಸೇರಿದಂತೆ ಅನೇಕರು ಇದ್ದರು.