ಬಿಜೆಪಿ ಸೇರಲು ಕಾನೂನು ತೊಡಕು ಬೆಂಬಲಕಷ್ಟೇ ಸುಮಲತಾ ಸೀಮಿತ

ಬೆಂಗಳೂರು,ಮಾ.೧೦:ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರವನ್ನು ಇಂದು ಪ್ರಕಟಿಸಿ, ನಾನು ರಾಜಕಾರಣದಲ್ಲಿರುವವರೆಗೂ ತಮ್ಮ ಪುತ್ರ ಅಭಿಷೇಕ್ ಅಂಬರೀಷ್ ರಾಜಕಾರಣಕ್ಕೆ ಬರಲ್ಲ, ಆತ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯದ ತಮ್ಮ ನಿವಾಸದಲ್ಲಿಂದು ತಮ್ಮ ಆಪ್ತರ ಸಭೆ ನಡೆಸಿ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬೆಂಬಲ ಪ್ರಧಾನಿ ಮೋದಿ ಅವರ ಸರ್ಕಾರಕ್ಕೆ, ಬಿಜೆಪಿಗೆ ನನ್ನ ಬೆಂಬಲ ಎಂದು ಘೋಷಿಸಿದರು.
ಬಿಜೆಪಿ ಸೇರ್ಪಡೆಗೆ ಸ್ವಕ್ಷೇತ್ರ ಸಂಸದೆಯಾಗಿರುವ ನನಗೆ ಒಂದಷ್ಟು ಕಾನೂನಾತ್ಮಕ ಅಡ್ಡಿಗಳಿವೆ. ಪಕ್ಷೇತರ ಸಂಸದರು ಆಯ್ಕೆಯಾದ ೬ ತಿಂಗಳ ಒಳಗೆ ಯಾವುದಾದರು ಪಕ್ಷ ಸೇರ್ಪಡೆಯಾಗಲು ಅವಕಾಶವಿದೆ. ಈಗ ೪ ವರ್ಷವಾಗಿದೆ. ಹಾಗಾಗಿ, ಸೇರ್ಪಡೆ ಸಾಧ್ಯವಿಲ್ಲ. ಬೆಂಬಲ ಘೋಷಣೆ ಮಾಡಿದ್ದೇನೆ ಎಂದರು.
ಬಿಜೆಪಿಗೆ ಬೆಂಬಲ ಘೋಷಿಸಿರುವ ತೀರ್ಮಾನದ ಹಿಂದೆ ನನ್ನ ಸ್ವಾರ್ಥ ಆಗಲಿ, ನನ್ನ ರಾಜಕೀಯ ಭವಿಷ್ಯವನ್ನಾಗಲಿ ನಾನು ನೋಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಸೇರುವ ತೀರ್ಮಾನ ಮಾಡಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ನನ್ನ ಬೆಂಬಲ, ಅವರ ನಾಯಕತ್ವ ಮೆಚ್ಚಿ ಬಿಜೆಪಿ ಬೆಂಬಲಿಸಲು ತೀರ್ಮಾನ ಮಾಡಿದ್ದೇನೆ ಎಂದರು. ಎಲ್ಲವನ್ನೂ ಅಳೆದು ತೂಗಿ ಈ ತೀರ್ಮಾನ ಮಾಡಿದ್ದೇನೆ, ವಿಶ್ವದಲ್ಲಿ ಭಾರತೀಯರು ತಲೆ ಎತ್ತಿ ನಡೆಯುವಂತೆ ಮಾಡಿರುವ ನರೇಂದ್ರಮೋದಿ ಅವರ ಸರ್ಕಾರಕ್ಕೆ ಇನ್ನು ಮುಂದೆ ನನ್ನ ಬೆಂಬಲ ಎಂದರು.
ಕುಟುಂಬ ರಾಜಕಾರಣ ಇಲ್ಲ
ತಮ್ಮ ಪುತ್ರ ಅಭೀಷೇಕ್ ಅಂಬರೀಷ್‌ಗಾಗಿ ತಾವು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ. ಅವನಿಗೆ ವಿಧಾನಸಭಾ ಟಿಕೆಟ್ ಕೇಳಿದ್ದೇನೆ ಎಂಬ ಸುದ್ದಿಗಳೆಲ್ಲ ನಿರಾಧಾರ ನಾನು ಕುಟುಂಬ ರಾಜಕಾರಣ ಮಾಡಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಇಟ್ಟ ಅವರು, ನಾನು ರಾಜಕಾರಣದಲ್ಲಿರುವವರೆಗೂ ನನ್ನ ಮಗ ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರಲ್ಲ, ಆತ ರಾಜಕೀಯಕ್ಕೆ ಹೆಜ್ಜೆ ಇಡಲ್ಲ ಎಂದು ಸ್ಪಷ್ಟಪಡಿಸಿದರು.
ಅಭಿಷೇಕ್ ಅಂಬರೀಷ್‌ರವರನ್ನು ಸಿನಿಮಾ ರಂಗಕ್ಕೂ ತರಲಿಲ್ಲ, ಕೆಲವು ನಿರ್ಮಾಪಕರು ಬಂದು ಆತನ ಸಿನಿಮಾ ಮಾಡಿದರು. ಆತ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾನೆ. ನಾನು ರಾಜಕಾರಣದಲ್ಲಿರುವವರೆಗೂ ಆತ ರಾಜಕೀಯಕ್ಕೆ ಬರಲ್ಲ ಎಂದರು.
ಎರಡೂ ರಾಜಕೀಯ ಪಕ್ಷಗಳು ಅಭಿಷೇಕ್ ಅಂಬರೀಷ್‌ರವರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ನೀಡುವುದಾಗಿ ಆಹ್ವಾನ ನೀಡಿದ್ದವು. ಆತ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದರು.
ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡಲ್ಲ, ನಾನು ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತೇನೆ ಎಂಬ ವರದಿಗಳು ಸರಿಯಲ್ಲ. ಯಾವುದೇ ಕಾರಣಕ್ಕೆ ಮಂಡ್ಯ ಬಿಡಲ್ಲ ಎಂದರು.