ಬಿಜೆಪಿ ಸೇರಲಿಲ್ಲದಿದ್ದಕ್ಕೆ ಜೈಲಿಗೆ ಕಳಿಸಿದ್ರು

ಬೆಳಗಾವಿ, ಡಿ. ೬- ಬಿಜೆಪಿ ಸೇರಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ನನ್ನನ್ನು ಜೈಲಿಗೆ ಹಾಕಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಲಿಲ್ಲ, ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು ತಮ್ಮನ್ನು ಜೈಲಿಗೆ ಹಾಕಿಸಿದರು ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ದಾಖಲೆಗಳು ಇದೆ ಎಂದರು.
ತಾವು ಬಿಜೆಪಿ ಸೇರಿದ್ದರೆ ಜೈಲಿಗೆ ಹೋಗುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ತಾವು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕೆ ಎಂದೂ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೇ ಪರಿಸ್ಥಿತಿ ಬರಲಿ ಎದುರಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂಬ ಹೇಳಿಕೆ ನೀಡಿರುವುದಕ್ಕೆ ಕಿಡಿಕಾರಿದ ಅವರು, ಪಾಪ ಯಡಿಯೂರಪ್ಪನವರು ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ. ರಾಜೀನಾಮೆ ನಂತರ ಅವರ ದುಃಖ ದುಮ್ಮಾನ ಹೆಚ್ಚಾಗಿದೆ. ಮಾನಸಿಕ ಹಿಂಸೆಯೂ ಹೆಚ್ಚಿದೆ. ಬಿಜೆಪಿಯವರ ಮೇಲೆ ದೂರುವುದಕ್ಕೆ ಆಗ ಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರ ಮೇಲೆ ಕೋಪ ತಾಪ ಹೊರ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಯಾವ ಪರಿಸ್ಥಿತಿ ಇದೆ. ಸರ್ಕಾರ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರದಲ್ಲಿ ಸ್ಥಿರತೆಯೇ ಇಲ್ಲ. ಸಚಿವರೊಬ್ಬರು ಬಸವರಾಜಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ ಮತ್ತೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಯಾರನ್ನು ನಿಯಂತ್ರಿಸಲು ಬೊಮ್ಮಾಯಿ ಅವರಿಗೆ ಆಗುತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್‌ನವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದೆಲ್ಲಾ ಹೇಳುವುದು ಹಾಸ್ಯಾಸ್ಪದ ಹೇಳಿದರು.
ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದು ಅಲ್ಲಿನ ಶಾಸಕರಿಗೆ ಗೊತ್ತು. ಸರ್ಕಾರವನ್ನು ಅವರ ಪಕ್ಷದವರೇ ಅಸ್ಥಿರಗೊಳಿಸುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದವರಾಗಿ ರಾಜ್ಯದಲ್ಲಿ ನಾಯಕರುಗಳನ್ನು ನಿಯಂತ್ರಿಸಲು ಬಿಜೆಪಿ ವರಿಷ್ಠರಿಗೆ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ನೆರೆ ಪರಿಹಾರಗಳು ಜನರಿಗೆ ತಲುಪಿಲ್ಲ. ಮಹದಾಯಿ ವಿಚಾರವನ್ನು ಬಗೆಹರಿಸಲು ಸಾಧ್ಯವಾಗಿಲ್ಲ., ಈ ಎಲ್ಲದರ ಬಗ್ಗೆಯೂ ಕಾಂಗ್ರೆಸ್ ದ್ವನಿ ಎತ್ತಲಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿ ವಿಧಾನಪರಿಷತ್‌ನ ಚುನಾವಣೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಡುವಿನ ಸ್ಪರ್ಧೆ ಅಲ್ಲ. ಇಲ್ಲಿ ಇರುವವರು ಕಾಂಗ್ರೆಸ್ ಅಭ್ಯರ್ಥಿ. ಎಲ್ಲ ಪಕ್ಷಗಳಲ್ಲೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾವೂ ಸಹ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ಚೆನ್ನರಾಜಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿದ್ದೇವೆ. ರಮೇಶ್ ಜಾರಕಿಹೊಳಿ ಅವರ ಓಪನ್ ವಾರ್ ಆಗಲಿ ಎಂಬ ಹೇಳಿಕೆ ಇಂಥಹದ್ದನ್ನೆಲ್ಲಾ ಎಷ್ಟೋ ನೋಡಿದ್ದೇನೆ ಎಂದು ಹೇಳಿದರು.