ಬಿಜೆಪಿ ಸುಳ್ಳು ಉತ್ಪಾದನಾ ಕಂಪನಿ: ಸಿದ್ಧರಾಮಯ್ಯ

ಹುಬ್ಬಳ್ಳಿ, ಜ19: ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಕಂಪನಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಲಂಬಾಣಿ ಜನಾಂಗಕ್ಕೆ ಹಕ್ಕು ಪತ್ರ ವಿತರಣೆ ಹೆಸರಲ್ಲಿಂದು ಕಲಬುರಗಿಗೆ ಆಗಮಿಸಿದ್ದು ತಾವೇ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಯತ್ನಿಸಿದ್ದರು, ನಾನು ನನ್ನ ಅಧಿಕಾರವಧಿಯಲ್ಲಿ ಲಂಬಾಣಿ ತಾಂಡಾಗಳ ಅಭಿವೃದ್ಧಿ ನಿಗಮಕ್ಕೆ 450 ಕೋಟಿ ರೂಪಾಯಿ ನೀಡಿದ್ದೇನೆ.
ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ತರಾತುರಿಯಲ್ಲಿ ಹಕ್ಕುಪತ್ರವನ್ನು ವಿತರಿಸಲು ಹೊರಟಿದೆ, ಅಡುಗೆ ಮಾಡಿದವರು ನಾವು, ಅವರು ಊಟಕ್ಕೆ ಆಗಮಿಸಿದ್ದಾರೆ ಎಂದು ಸಿದ್ಧರಾಮಯ್ಯ ಕುಟುಕಿದರು.
ಪ್ರಧಾನಿ ಮೋದಿ ಕಂಡರೆ ಕಾಂಗ್ರೆಸ್‍ನವರಿಗೆ ಭಯವೇ? ಎಂಬ ಪ್ರಶ್ನೆಗೆ ಉತ್ತರಿಸುತ್ತ, ದೇಶದ ಪ್ರಧಾನಿಗಳು ಎಂದು ಮೋದಿ ಕುರಿತು ನನಗೆ ಗೌರವವಿದೆ. ಆದರೆ ನನ್ನ ಕಂಡರೆ ಬಿಜೆಪಿಯವರಿಗೇ ಭಯವಿದೆ ಏಕೆಂದರೆ ನಾನು ಆರ್.ಎಸ್.ಎಸ್. ಕುರಿತು ಟೀಕೆ ಮಾಡಿ ಸತ್ಯವನ್ನು ಬಯಲಿಗಿಡುತ್ತೇನೆ ಎಂದು ಅವರು ನುಡಿದರು.
ಮೋದಿಯವರು ಭಾಷಣ ಮಾಡಿದಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬುದು ಸುಳ್ಳು, ಅವರು ಭಾಷಣ ಮಾಡಿದ ಕೇರಳ ಮತ್ತಿತರೆಡೆ ಬಿಜೆಪಿ ಸೋಲು ಕಂಡಿಲ್ಲವೇ? ಎಂದವರು ಪ್ರಶ್ನಿಸಿದರು.