ಬಿಜೆಪಿ ಸುಳ್ಳಿನ ವಿ.ವಿ: ಡಿಕೆಶಿ

ಹುಬ್ಬಳ್ಳಿ,ಜ.2: ಬಿಜೆಪಿ ಸುಳ್ಳಿನ ವಿಶ್ವವಿದ್ಯಾಲಯ, ಕಳೆದ ಮೂರು ವರ್ಷಗಳಿಂದ ಮಹದಾಯಿ ಅನುಷ್ಠಾನದಲ್ಲಿ ಏನೂ ಮಾಡದ ಬಿಜೆಪಿಯವರು ನಾವು ಮಹದಾಯಿ ಕುರಿತು ಜನರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದಂತೆ ಇದೀಗ ಮಹದಾಯಿ ನೆನಪಿಗೆ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅವರದ್ದೆ ಸರ್ಕಾರ ಇದೆ. ಅಲ್ಲಿ ಕುದುರೆ ವ್ಯಾಪಾರ ಮಾಡಿ ಕಾಂಗ್ರೆಸ್ ನವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅದರಂತೆ ರಾಜ್ಯದಲ್ಲಿಯೂ ಹಾಗೇ ಮಾಡಿದ್ದಾರೆ. ಮೂರು ರಾಜ್ಯಗಳಲ್ಲಿ ಅವರದ್ದೇ ಸರ್ಕಾರ ಇದೆ. ಆದರೂ ಯೋಜನೆ ಜಾರಿ ಮಾಡಲು ಆಗಿಲ್ಲ.
ಈಗ ನಾವು, ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು- ಕಾಮಗಾರಿ ಆರಂಭಿಸಿ ಎಂದು ಪತ್ರ ಸಿದ್ದಪಡಿಸಿದ್ದಾರೆ ಅಷ್ಟೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆ ಆರಂಭ ಆದರೆ ಗೋವಾ ಸಚಿವರೊಬ್ಬರು ರಾಜೀನಾಮೆ ಕೊಡುತ್ತಾರಂತೆ, ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ. ಆದರೆ ಮಹದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ- ಕಾಮಗಾರಿಯಾದರೂ ಪೂರ್ಣಗೊಳಿಸಬೇಕಿತ್ತು ಎಂದು ಡಿಕೆಶಿ ಹರಿಹಾಯ್ದರು.

ಕಾಂಗ್ರೆಸ್ ನವರು ಮಹದಾಯಿ ವಿಷಯದಲ್ಲಿ `ಅಪ್‍ಡೇಟ್’ ಆಗಿಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪತ್ರ ಓದಲಿ ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕರಾರು ಹಾಕಲಾಗಿದೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ?ಎಂದು ಪ್ರಶ್ನೆ ಮಾಡಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿಯೂ ಸರ್ಕಾರ ತಲೆಯ ಮೇಲೆ ತುಪ್ಪ ಇಡುವ ಕೆಲಸ ಮಾಡಿದೆ. ಬಿಜೆಪಿಯವರು ತಮ್ಮ ಕೈಯಲ್ಲಿ ಆಗುವುದಾದರೆ ಆಗುವುದೆಂದು ಹೇಳಬೇಕು. ಅದು ಬಿಟ್ಟು ಜನಕ್ಕೆ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು ಎಂದು ಅವರು ಹರಿಹಾಯ್ದರು.
ಮುಂಬರುವ ಚುನಾವಣೆಯಲ್ಲಿ ನಾವು ಯಾರ ಜೊತೆಗೂ ಮ್ಯಾಚ್ ಫಿಕ್ಸಿಂಗ್ ಮಾಡುವುದಿಲ್ಲ. ನಮ್ಮಲ್ಲಿ ಯಾವುದೇ ಬಣವಿಲ್ಲ. ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಅದು ಸರಿಯಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು