ಬಿಜೆಪಿ ಸಾವರ್ಕರರನ್ನೇ ರಾಷ್ಟ್ರಪಿತ ಎಂದು ಘೋಷಣೆ ಮಾಡಬಹುದು: ಓವೈಸಿ ವ್ಯಂಗ್ಯ

ಕಲಬುರಗಿ,ಅ.13: ಭಾರತೀಯ ಜನತಾ ಪಾರ್ಟಿ ಶೀಘ್ರದಲ್ಲಿಯೇ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಭಾರತ ದೇಶದ ರಾಷ್ಟ್ರಪಿತ ಎಂದು ಘೊಷಿಸಲಿದೆ ಎಂದು ಆಲ್ ಇಂಡಿಯಾ ಮಜಲಿಸ್ ಇ ಇತ್ತೇದುಲ್ ಮಸ್ಲೀಮಿನ್ ಮುಖ್ಯಸ್ಥ ಹಾಗೂ ಸಂಸದ ಡಾ. ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ನಾಯಕರು ಯಾವಾಗಲೂ ತಿರುಚಿದ ಇತಿಹಾಸವನ್ನು ಹೇಳಿಕೊಂಡು ಬರುತ್ತಿದ್ದಾರೆ. ಇಲ್ಲಿಯೂ ಅದೇ ಕೆಲಸ ಮಾಡಿದ್ದಾರೆ. ಇತಿಹಾಸ ಹೇಳುವುದೊಂದು, ಅವರು ಹೇಳುವುದೇ ಮತ್ತೊಂದು. ಇದೇ ರೀತಿ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಮಹಾತ್ಮಾಗಾಂಧಿ ಅವರ ಬದಲಾಗಿ ವಿ.ಡಿ. ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಣೆ ಮಾಡಬಹುದು ಎಂದು ಅವರು ಲೇವಡಿ ಮಾಡಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ನವದೆಹಲಿಯ ಅಂಬೇಡ್ಕರ್ ಇಂಟರ್‍ನ್ಯಾಶನಲ್ ಸೆಂಟರ್‍ನಲ್ಲಿ ಮಂಗಳವಾರ ಜರುಗಿದ ವೀರ್ ಸಾವರ್ಕರ್ ದೇಶ ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಮಹಾತ್ಮಾ ಗಾಂಧಿಯವರ ಕೋರಿಕೆಯ ಮೇರೆಗೆ ವಿ.ಡಿ. ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು. ಅರ್ಜಿ ಸಲ್ಲಿಸಿದ್ದನ್ನೇ ಇತ್ತೀಚೆಗೆ ದೊಡ್ಡ ವಿಷಯ ಮಾಡಿ ಆಡಿಕೊಳ್ಳಲಾಗುತ್ತಿದೆ. ಆದಾಗ್ಯೂ, ಅಸಲಿ ಚಿತ್ರಣವನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಡಲಾಗುತ್ತಿದೆ ಎಂದು ಹೇಳಿದ್ದರು. ಅದನ್ನು ಖಂಡಿಸಿ ಓವೈಸಿ ಬಿಜೆಪಿಯವರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.