
ಬ್ಯಾಡಗಿ,ಮಾ.15: ರಾಜ್ಯದಲ್ಲಿ ಲೂಟಿ ಹೊಡೆದ ಲಂಚದ ಹಣದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಜನರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಕಳೆದ ನಾಲ್ಕು ವರ್ಷಗಳಿಂದ ವ್ಯಾಪಕವಾದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಸಿಎಲ್‍ಪಿ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಹಾಲಿ ಶಾಸಕರೊಬ್ಬರು ಎರಡೂವರೆ ಸಾವಿರ ಕೋಟಿ ಕೊಟ್ಟು ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬೇಕಾಗಿದೆ ಎಂದು ಹೇಳಿಕೆ ನೀಡಿರುವುದು ಜಗಜ್ಜಾಹೀರಾಗಿದ್ದು, ಇಂತವರ ಭ್ರಷ್ಟಾಚಾರದ ಬಗ್ಗೆ ಹೇಳಲು ಇನ್ನೇನಿದೆ, ಪಿಎಸ್’ಐ ನೇಮಕಾತಿಯ ಹಗರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಯಲ್ಲೇ ನಡೆದಿದೆ ಎಂದು ಆರೋಪಿಸಿದರಲ್ಲದೇ, ರಾಜ್ಯದಲ್ಲಿ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಆಧಿಕಾರಕ್ಕೆ ಬಂದಿದ್ದೀರಿ ಇದೊಂದು ಅನೈತಿಕ ಸರ್ಕಾರವಾಗಿದ್ದು, ಇದರ ಆಪರೇಶನ್ ಕಮಲಕ್ಕೆ ಎಲ್ಲಿಂದ ಹಣ ಬಂತು..? ಎಂದು ಪ್ರಶ್ನಿಸಿದರು.
ಪ್ರಜ್ಞಾವಂತ ಮತದಾರರೆಲ್ಲರೂ ಕೊಡುವ ತೀರ್ಪು ರಾಜ್ಯದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ದುರಾಡಳಿತ, ಜನವಿರೋಧಿ ಆಡಳಿತ ಜನರಿಗೆ ತಿಳಿಸಿಕೊಡುವ ಕೆಲಸ ನಮ್ಮೆಲ್ಲರ ಮೇಲಿದೆ. ಪ್ರಸ್ತುತ ಬ್ಯಾಡಗಿ ಕ್ಷೇತ್ರದಲ್ಲಿ ಟಿಕೆಟ್‍ಗಾಗಿ 8 ಜನ ಅರ್ಜಿ ಸಲ್ಲಿಸಿದ್ದಾರೆ, ಆದರೆ ಎಲ್ಲ ಘಟಕದ ಅಧ್ಯಕ್ಷರು ಹಾಗೂ ಕ್ಷೇತ್ರದಲ್ಲಿನ ಜನರ ಅಭಿಪ್ರಾಯ ಸರ್ವೆ ವರದಿಯನ್ನು ನೋಡಿಯೇ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ, ಟಿಕೆಟ್ ಯಾರಿಗೇ ಸಿಕ್ಕರೂ ಸಹ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತಹ ಕೆಲಸದಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಿದ್ಧರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಸುವರ್ಣ ಯುಗವನ್ನು ಕಂಡಿದ್ದು, ಎಲ್ಲ ವರ್ಗದ ಜನರ ಸಂಕಷ್ಟಗಳಿಗೂ ಸ್ಪಂದಿಸಿ, ಶೈಕ್ಷಣಿಕ, ನೀರಾವರಿ ಸೇರಿದಂತೆ ಎಲ್ಲ ವರ್ಗದ ಜನರ ಕೆಲಸಗಳನ್ನು ಮಾಡಿದ್ದೇವೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಕೇಂದ್ರದಲ್ಲಿ 5 ದಶಕಗಳ ಕಾಲ ದೇಶವನ್ನು ಕಟ್ಟುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಹೇಳಿದರು.
2 ಸಾವಿರ ಕೋಟಿ ಅನುದಾನ:
ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ, ನನ್ನ ಅಧಿಕಾರದ ಅವಧಿಯಲ್ಲಿ ಪ್ರತಿ ಗ್ರಾಮಗಳಿಗೂ ಅನುದಾನ ನೀಡಿದ್ದೇನೆ ಆದರೆ ಪ್ರಸ್ತುತ ಅಧಿಕಾರದಲ್ಲಿ ಇರುವಂತಹ ಶಾಸಕರು ನಾನೇ ಮಾಡಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಕ್ಷೇತ್ರದ ಮತದಾರರು ಇದರ ಬಗ್ಗೆ ಅರಿಯಬೇಕಾಗಿದೆ ಎಂದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಈವರೆಗೂ ಪರಿಹಾರವನ್ನು ಬಿಜೆಪಿ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಗದಿಪಡಿಸಿದ ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸದಿದ್ದರೂ ಹಾಲಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲಾಯಿತು ಎಂದು ಗೇಲಿ ಮಾಡಿದರಲ್ಲದೇ, ಮೆಣಸಿನಕಾಯಿ ಮೇಲಿನ ಜಿಎಸ್‍ಟಿಯನ್ನು ದಲಾಲರ ಬದಲಾಗಿ ಖರೀದಿದಾರರಿಂದ ತುಂಬಿಸುವಂತಹ ಕೆಲಸವಾಗಬೇಕಾಗಿದೆ ಎಂದರು.
ಮಾಜಿ ಸಂಸದ ಐ.ಜಿ.ಸನದಿ ಮಾತನಾಡಿ, ಬಿಜೆಪಿ ಅಧಿಕಾರ ಪಡೆದು ಹಣ ಲೂಟಿ ಮಾಡಲು ನಿರ್ಧರಿಸಿದೆ, ರಾಜ್ಯದ ಸಮಸ್ಯೆ ಕೇಳದ ದೆಹಲಿಯಲ್ಲಿರುವ ನಾಯಕರು ಇದೀಗ ರಾಜ್ಯದತ್ತ ಪದೇಪದೇ ಮುಖ ಮಾಡುತ್ತಿದ್ಧಾರೆ, ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಪ್ರತಿ ಬಾರಿಯೂ ಭಾವನಾತ್ಮಕ ವಿಷಯಗಳಿಂದ ಚುನಾವಣೆ ಎದುರಿಸುತ್ತಿದ್ದು ಯುವಕರು ಇಂತಹುಗಳಿಗೆ ಕಿವಿಗೊಡದೇ ಭ್ರಷ್ಟರಿಂದ ಕೂಡಿದಂತಹ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪಣತೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಮೀರ ಅಹ್ಮದ್‍ಖಾನ್, ಮಾಜಿ ಸಚಿವೆ ಉಮಾಶ್ರೀ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ವಿಧಾನಸಭೆಯ ಮುಖ್ಯ ಸಚೇತಕ ಪ್ರಕಾಶ ರಾಥೋಡ್ ಮಾತನಾಡಿದರು. ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಬ್ಯಾಡಗಿ ಮತ್ತು ಕಾಗಿನೆಲೆ ಬ್ಲಾಕ್ ಅಧ್ಯಕ್ಷರುಗಳಾದ ದಾನಪ್ಪ ಚೂರಿ, ಶಿವನಗೌಡ ವೀರನಗೌಡ್ರ, ಸಂಜೀವಕುಮಾರ ನೀರಲಗಿ, ನಾಗರಾಜ ಆನ್ವೇರಿ, ಪ್ರಕಾಶ ಬನ್ನಿಹಟ್ಟಿ, ಸುರೇಶಗೌಡ ಪಾಟೀಲ, ಶಂಕರಗೌಡ ಪಾಟೀಲ, ಎ.ಎಂ.ಸೌದಾಗರ, ರಮೇಶ ಸುತ್ತಕೋಟಿ, ಮಂಜುನಾಥ ಬೋವಿ, ಮುನಾಫ್ ಎರೇಶೀಮಿ, ಜಗದೀಶ ಪೂಜಾರ, ಖಾದರಸಾಬ್ ದೊಡ್ಮನಿ, ಶಿವಪುತ್ರಪ್ಪ ಅಗಡಿ, ಶಂಭನಗೌಡ ಪಾಟೀಲ, ಡಿ.ಎಚ್.ಬುಡ್ಡಗೌಡ್ರ, ಜಗದೀಶ ದೊಡ್ಡಮನಿ, ರಮೇಶ ಮೋಟೆಬೆನ್ನೂರ, ಸುಮಿತ್ರ ನವಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಕಾಂಕ್ಷಿಗಳ ಬಣ ರಾಜಕಾರಣ:
ಕಾಂಗ್ರೆಸ್ ನಾಯಕರು ಆಗಮಿಸುವ ಮುನ್ನವೇ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಬಸವರಾಜ ಶಿವಣ್ಣನವರ ಮತ್ತು ಎಸ್.ಆರ್.ಪಾಟೀಲ ಅಭಿಮಾನಿಗಳ ನಡುವಿನ ಬಣದ ಬಡಿದಾಟ ಮತ್ತೊಮ್ಮೆ ಅನಾವರಣಗೊಂಡಿತು, ಮುಖ್ಯವೇದಿಕೆ ಬಲಭಾಗದಲ್ಲೇ ಇಬ್ಬರನ್ನು ಪ್ರತ್ಯೇಕ ಮೆರವಣಿಗೆ ಮಾಡಿದ್ದಲ್ಲದೇ ತಮ್ಮ ತಮ್ಮ ನಾಯಕರಿಗೆ ಟಿಕೆಟ್ ಕೊಡಬೇಕೆಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಿದ್ದರು.