
ತಿ.ನರಸೀಪುರ: ಏ.02:- ಬಿಜೆಪಿ ಪಕ್ಷ ಮಗ್ಗುಲಲ್ಲಿ ಹಲವು ಭ್ರಷ್ಟರನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಕಾಯಕದಲ್ಲಿ ತೊಡಗಿದೆ.ಹಾಗಾಗಿ ಬಿಜೆಪಿ ಸರ್ಕಾರ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ವರುಣಾ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ,ರಂಗಾಚಾರಿಹುಂಡಿ,ರಂಗನಾಥಪುರ,ಹುನಗನಹಳ್ಳಿ ,ಮಾದೇಗೌಡನಹುಂಡಿ,ಪಟ್ಟೆಹುಂಡಿ,ಎಳೆಗೌಡನಹುಂಡಿ,ಹಿಟ್ಟುವಳ್ಳಿ ಮತ್ತು ಕುಪ್ಯ ಗ್ರಾಮಗಳಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ ನಂತರ ಅವರು ಮಾತಾನಾಡಿದರು.ಈಗಿನ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ.ಮೇಲ್ನೋಟಕ್ಕೆ ಮಾತ್ರ ಪಾರದರ್ಶಕ ಮತ್ತು ಪ್ರಾಮಾಣಿಕ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ.
ಪಿಎಸ್‍ಐ ಹಗರಣದಲ್ಲಿ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರಿಂದ ತನಿಖೆಯನ್ನು ದಿಕ್ಕುತಪ್ಪಿಸಲಾಯಿತು.ಈಶ್ವರಪ್ಪ ಭ್ರಷ್ಟಚಾರದಿಂದ ಸಚಿವ ಸ್ಥಾನ ಕಳೆದುಕೊಂಡರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮದಿಂದ ಬಿಜೆಪಿ ಪಕ್ಷದಿಂದ ಉಚ್ಛಾಟಿತರಾದರು.ಅಲ್ಲದೆ ಈಗಿನ ಸಿಎಂ ಕೂಡ 40% ಕಮಿಷನ್ ಮೂಲಕ ಪೇ ಸಿಎಂ ಎಂಬ ಕುಖ್ಯಾತಿಗೆ ಪಡೆದಿದ್ದಾರೆ.
ಇಡೀ ಮಂತ್ರಿಮಂಡಲ ಭ್ರಷ್ಟಾಚಾರದಲ್ಲಿ ಮುಳುಗಿದೆ.ಅಲ್ಲದೆ,ಬಿಜೆಪಿ ಸರ್ಕಾರ ಅವೈಜ್ಞಾನಿಕ ತೆರಿಗೆ ಸಂಗ್ರಹಣೆಯಲ್ಲಿ ತೊಡಗಿದೆ.ಬಡಜನರು ಉಪಯೋಗಿಸುವ ವಸ್ತುಗಳ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದೆ.ಹಾಗಾಗಿ ಬಿಜೆಪಿ ಪಕ್ಷ ಗ್ರಾಮೀಣ ,ಬಡ,ಕೃಷಿಕರ ಪರವಾಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ಪ್ರತಿ ಕುಟುಂಬದ ಮುಖ್ಯಸ್ಥೆಗೆ 2000/-ರೂಗಳು,ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200ಯೂನಿಟ್ ಉಚಿತ ವಿದ್ಯುತ್,ಅನ್ನಭಾಗ್ಯ ಯೋಜನೆಯಡಿ ಪ್ರತಿವ್ಯಕ್ತಿಗೆ 10ಕೆಜಿ ಅಕ್ಕಿ ಹಾಗೂ ಯುವ ನಿಧಿಯಡಿ ಪದವೀಧರ ನಿರುದ್ಯೋಗಿಗಳಿಗೆ 3000/- ಮತ್ತು ಡಿಪೆÇ್ಲಮಾ ಪದವೀಧರರಿಗೆ 1500/-ರೂಗಳ ಗೌರವಧನ ನೀಡಲು ನಿರ್ಧರಿಸಿದೆ.ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾಂಗ್ರೆಸ್ ನ ಸಂಕಲ್ಪವಾಗಿದೆ ಎಂದರು.
ಸಿದ್ದರಾಮಯ್ಯನವರು ತಮ್ಮ ಸ್ವಕ್ಷೇತ್ರ ವರುಣಾದಲ್ಲಿ ಈ ಬಾರಿ ಸ್ಪರ್ಧೆ ಮಾಡುತ್ತಿದ್ದು, ಇದು ಅವರ ಕೊನೆ ಚುನಾವಣೆ.ಜಾತ್ಯಾತಿತ ನಾಯಕರಾದ ಅವರನ್ನು ಕ್ಷೇತ್ರದ ಎಲ್ಲ ವರ್ಗದ ಜನತೆ ಆಶೀರ್ವದಿಸಬೇಕು.ರಾಜ್ಯದ ಎಲ್ಲ ಕಡೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮುಖೇನ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸಂದರ್ಭದಲ್ಲಿ ಪಿಕಾರ್ಡ್ ಅಧ್ಯಕ್ಷ ಮಹದೇವಣ್ಣ,ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ,ಮಾಜಿ ಜಿ.ಪಂ.ಸದಸ್ಯ ಕೆ.ಮಹದೇವ,ಪ್ರಶಾಂತ್ ಬಾಬು,ಕಾಂಗ್ರೆಸ್ ಶಿಕ್ಷಕರ ಮತ್ತು ಪಧವೀಧರ ಮೈಸೂರು ವಿಭಾಗದ ಅಧ್ಯಕ್ಷ ಎಂ.ರಮೇಶ್,ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು(ಅಮಾಸೆಗೌಡ ),ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜಾದ್ ಖಾನ್,ಮಾಜಿ ಪುರಸಭೆ ಅಧ್ಯಕ್ಷರಾದ ಸೋಮು ,ಮದನ್ ರಾಜ್,ಕುಪ್ಯ ಗ್ರಾ.ಪಂ .ಅಧ್ಯಕ್ಷ ರಾಘವೇಂದ್ರ,ಮಾಜಿ ಅಧ್ಯಕ್ಷೆ ಭಾಗ್ಯಮ್ಮ ,ಕಲ್ಪನಾ,ಮಹದೇವಶೆಟ್ಟಿ ,ಗೋಪಿ ಇತರರು ಹಾಜರಿದ್ದರು.