ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಲು ಪ್ರಧಾನಿ ಕರೆ

ತುಮಕೂರು, ಮೇ 5- ದೇಶದಲ್ಲಿ 70 ವರ್ಷಗಳಿಂದ ಕಾಂಗ್ರೆಸ್ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 9 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್‌-ಜೆಡಿಎಸ್ ಪಕ್ಷದಿಂದ ಕರ್ನಾಟಕದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಇನ್ನು ಮುಂದೆ ಕಾಂಗ್ರೆಸ್-ಜೆಡಿಎಸ್ ಆಟ ನಡೆಯುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಜೈ ಭಜರಂಗ ಬಲಿ ಎಂದು ಕೂಗಿದರೆ ಕಾಂಗ್ರೆಸ್‌ನವರಿಗೆ ತೊಂದರೆಯಾಗುತ್ತದೆ. ಕಾಂಗ್ರೆಸ್‌ನವರು ವೋಟ್ ಬ್ಯಾಂಕ್‌ನ ಗುಲಾಮರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌-ಜೆಡಿಎಸ್‌ಗೆ ಕೊಡುವ ಮತ ಅಸ್ಥಿರ ಸರ್ಕಾರಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಅವರು ನೆರೆದಿದ್ದ ಜನಸ್ತೋಮಕ್ಕೆ ಕರೆ ನೀಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ 12 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯನ್ನು ಮಡಿಕೆಯಲ್ಲಿಟ್ಟಿದ್ದ ಅಡಿಕೆಯ ಹೊಂಬಾಳೆಯನ್ನು ತೆರೆದು ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬುಧವಾರ ನಡೆಯುವ ಮತದಾನದಲ್ಲಿ ನೀವೆಲ್ಲರೂ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಲವು ಕಾಮಗಾರಿಗಳನ್ನು ನಿಲ್ಲಿಸಲು ಪ್ರಯತ್ನ ನಡೆಸಿದ್ದವು. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 85 ಪರ್ಸೆಂಟ್ ಕಮಿಷನ್ ಪಡೆದು ಕಾಮಗಾರಿ ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ನ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರೇ 85 ಪರ್ಸೆಂಟ್ ಬಗ್ಗೆ ಒಪ್ಪಿಕೊಂಡಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಎಂದು ಆರೋಪಿಸಿದರು.
ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ತ್ರಿವಿಧ ದಾಸೋಹವನ್ನು ನೆನೆದ ಪ್ರಧಾನಿ ಮೋದಿಯವರು, ಅನ್ನ, ಅಕ್ಷರ ದಾಸೋಹದಂತೆ ಕರ್ನಾಟಕ ಸರ್ಕಾರ ಕೂಡ ಅಭಿವೃದ್ಧಿಯ ಸಂಕಲ್ಪ ಮಾಡಿದೆ. ಡಬಲ್ ಇಂಜಿನ್ ಸರ್ಕಾರದಿಂದ ಜನರ ಜೀವನ ಸುಧಾರಣೆಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಬದುಕು ಹಸನಾಗಿದ್ದು, ಈ ಯೋಜನೆಯ ಲಾಭ ದೇಶದ ೨.೫ ಲಕ್ಷ ಕೋಟಿ ರೈತರಿಗೆ ತಲುಪಿದೆ ಎಂದರು.
ಪ್ರಸ್ತುತ ದೇಶದ ಹಳ್ಳಿಗಳಲ್ಲಿ ದವಸ ಧಾನ್ಯಗಳ ಸ್ಟೋರೇಜ್ ಸೌಲಭ್ಯ ಕಲ್ಪಿಸಲಾಗಿದೆ. ರೈತರ ರಸಗೊಬ್ಬರದ ದರ ಕಡಿಮೆ ಮಾಡಲಾಗಿದೆ. ದುಪ್ಪಟ ಬೆಲೆಯ ರಸಗೊಬ್ಬರ ಖರೀದಿ ಮಾಡಿ ರೈತರಿಗೆ ಕಡಿಮೆ ಬೆಲೆಗೆ ಕೊಡಲಾಗುತ್ತದೆ ಎಂದು ಅವರು ಹೇಳಿದರು.
ದೇಶದಲ್ಲಿ ಮೋದಿ ಬಂದಾಗಿನಿಂದ ಎಲ್ಲವೂ ಬದಲಾಗಿದೆ. ದೇಶದ ಹಳ್ಳಿಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ೨೦೧೪ ಕಿಂತ ಮುಂಚೆ ೧೮ ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ಅದೆಲ್ಲಾ ಸಾಧ್ಯವಾಗಿದೆ ಎಂದರು.
ಈಗ ದೇಶದಲ್ಲಿ ನಲ್ಲಿ ಮೂಲಕ ಮನೆ ಮನೆಗೆ ಶುದ್ದ ಕುಡಿಯುವ ನೀರು ಸಿಗುತ್ತಿದೆ. ತುಮಕೂರು ಜಿಲ್ಲೆಯಲ್ಲೂ ೧.೫ ಲಕ್ಷ ಕುಟುಂಬಕ್ಕೆ ಜಲ ಜೀವನ್ ಮಿಷನ್ ಮೂಲಕ ನೀರು ಒದಗಿಸಲಾಗುತ್ತಿದೆ ಎಂದ ಅವರು,
ಫುಡ್‌ಪಾರ್ಕ್ ಮೂಲಕ ರೈತರಿಗೆ ಅನುಕೂಲವಾಗಿದೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿದೆ ಎಂದರು.
ಕಲ್ಪತರುನಾಡಿನ ಪ್ರಮುಖ ಬೆಳೆಯಾಗಿರುವ ಕೊಬ್ಬರಿಗೆ ಬೆಂಬಲ ಬೆಲೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಈ ಕೆಲಸವನ್ನು ಮಾಡಲಿಲ್ಲ. ಕಾಂಗ್ರೆಸ್-ಜೆಡಿಎಸ್‌ನವರು ರೈತರಿಗೆ, ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿ ಮಾಡಲಿಲ್ಲ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಯೋಜನೆಗಳು ಸತ್ತು ಹೋಗಲಿವೆ ಎಂದು ಅವರು ಹೇಳಿದರು.
ಮತ್ತೆ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತಷ್ಟು ಅಭಿವೃದ್ಧಿ ಪರ್ವ ಸೃಷ್ಠಿಯಾಗುತ್ತದೆ. ಈ ಬಾರಿಯ ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೫ ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮನೆ ಮನೆಗೆ ನೀರು ತಲುಪಿಸಲು ಬದ್ದತೆ ನಮ್ಮ ಸರ್ಕಾರಕ್ಕಿದೆ ಎಂದರು.
ಎನ್ಇಪಿ ಜಾರಿ
ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ತುಂಬಾ ಅನುಕೂಲ ಆಗಿದೆ ಎಂದು ಕಸ್ರೂರಿ ರಂಗನ್ ವರದಿ ಉದಾಹರಿಸಿದ ಅವರು, ಮಾತೃ ಭಾಷೆ ಮೂಲಕ ಎಲ್ಲಿಯ ತನಕ ಓದಲು ಬಯಸುತ್ತಾರೋ ಅಲ್ಲಿ ತನಕ ಓದಬಹುದು. ಕಾಂಗ್ರೆಸ್‌ನವರು ಇಂತಹ ಎನ್ಇಪಿ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಇಂಗ್ಲೀಷ್ ಮೇಲೆ ಬಹಳ ಪ್ರೀತಿ. ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ತಾನೆ. ಆದರೆ ಕಾಂಗ್ರೆಸ್ ನವರು ಇದರ ವಿರುದ್ದ ಇದ್ದಾರೆ. ಇಂತಹ ಕಾಂಗ್ರೆಸ್‌ಗೆ ಶಿಕ್ಷೆ ಕೊಡುವ ಚುನಾವಣೆ ಇದಾಗಿದೆ ಎಂದರು.
ಕೇಂದ್ರದ ಹಲವು ಪರೀಕ್ಷೆಗಳು ಈಗ ಕನ್ನಡದಲ್ಲಿ ನಡೆಯುತ್ತಿದ್ದು, ಇದರಿಂದ ಸ್ಥಳೀಯ ಅಭ್ಯರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಆದರೆ ಕಾಂಗ್ರೆಸ್ ಕರ್ನಾಟಕದ ಯುವಕರಿಗೆ ಮೋಸ ಮಾಡುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಶೈಕ್ಷಣಿಕವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದು, ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿ ಜಾರಿಗೆ ತಂದಿದೆ ಎಂದರು.
ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಘಟಕ ತುಮಕೂರು ಜಿಲ್ಲೆಯಲ್ಲಿ ಸ್ಥಾಪನೆಗೊಂಡಿದೆ. ಇದರ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡುವ ಅವಕಾಶ ದೊರೆತಿದ್ದ ನನ್ನ ಸೌಭಾಗ್ಯ ಎಂದ ಅವರು, ಬಿಜೆಪಿ ಸರ್ಕಾರ ಆಧುನಿಕ ರಕ್ಷಣಾ ವ್ಯವಸ್ಥೆ ಒದಗಿಸುವ ಮೂಲಕ ಸೇನೆ ಬಲವರ್ಧನೆಗೆ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಹೇಳಿದರು.
ಕಾಂಗ್ರೆಸ್ ಕಾಲದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿತ್ತು. ಅವರ ಕಾಲದಲ್ಲಿ ಎಲ್ಲವೂ ಲೂಟಿ ಆಗಿತ್ತು. ಅವರದ್ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು. ಹೆಚ್‌ಎಎಲ್ ನಿರ್ನಾಮ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಎಚ್‌ಎಎಲ್ ಹೆಸರು ಬರುತ್ತಿರಲಿಲ್ಲ ಎಂದು ಹರಿಹಾಯ್ದರು.‌
ಕರ್ನಾಟಕವನ್ನು ನಂಬರ್ ಒನ್ ಮಾಡಲು ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪವನ್ನು ನೀವೆಲ್ಲರೂ ಮಾಡಬೇಕು. ಬುಧವಾರ ಮತದಾನ ನಡೆಯುತ್ತಿದ್ದು, ನಾವು ವಿಜಯ ಸಂಕಲ್ಪ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದ ಅವರು, ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್‌‌ನ ಮನೆ ಮನೆಗೂ ತೆರಳಿ ಡಬಲ್ ಇಂಜಿನ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಟ್ಟು ಬಿಜೆಪಿಗೆ ಅತ್ಯಧಿಕ ಮತಗಳು ಬರುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಕರಂದ್ಲಾಜೆ, ರಾಜ್ಯಸಭಾ ಸದಸ್ಯ ಜಗ್ಗೇಶ್, ಸಂಸದ ಜಿ.ಎಸ್. ಬಸವರಾಜು, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಹೆಬ್ಬಾಕ, ಬಿ.ಕೆ. ಮಂಜುನಾಥ್, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ಹಾಗೂ ನೆಲಮಂಗಲ ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳ ಅಭ್ಯರ್ಥಿಗಳು ಭಾಗವಹಿಸಿದ್ದರು.