ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಸಪ್ತಗಿರಿಗೌಡ ಮನವಿ

ಬೆಂಗಳೂರು,ಮೇ೫: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಗಾಂಧಿನಗರ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿಯಾದ ತಮಗೆ ಆರ್ಶೀವಾದ ಮಾಡಬೇಕು ಎಂದು ಗಾಂಧಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಮತದಾರರಲ್ಲಿ ಮನವಿ ಮಾಡಿದರು.
ಇಂದು ಕ್ಷೇತ್ರದ ಕಾಟನ್‌ಪೇಟೆ ವಾರ್ಡ್‌ನ ನಾಗಮ್ಮ ಬ್ಲಾಕ್ ಸೇರಿದಂತೆ ಹಲವೆಡೆ ನೂರಾರು ಕಾರ್ಯಕರ್ತರೊಂದಿಗೆ ಮತಯಾಚನೆ ನಡೆಸಿ, ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಕರೆ ನೀಡಿದ್ದಾರೆ. ಅದರಂತೆ ಗಾಂಧಿನಗರ ಕ್ಷೇತ್ರದ ಮತದಾರರು ದೊಡ್ಡ ಮನಸ್ಸು ಮಾಡಿ ನನ್ನನ್ನು ಈ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗುವಂತೆ ಕೋರಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿ ವೇಗ ಪಡೆಯುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಈ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಗಾಂಧಿನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದೇನೆ. ನನಗೆ ಆರ್ಶೀವದಿಸಿ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರು ಪ್ರಚಾರಕ್ಕೆ ಹೋದೆಡೆಯಲ್ಲೆಲ್ಲ ಜನ ಆರತಿ ಬೆಳಗಿ, ಪ್ರೀತ್ಯಾಧಾರಗಳಿಂದ ಸ್ವಾಗತಿಸುತ್ತಿದ್ದ ಸಾಮಾನ್ಯವಾಗಿತ್ತು. ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರ ಜತೆ ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್ ನಾಗರಾಜ್, ಪಳನಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರು ಇಂದು ಮತಯಾಚನೆಗೆ ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ಮಹಿಳಾ ಮತದಾರರೊಬ್ಬರು ಆರತಿ ಬೆಳಗಿ ಸ್ವಾಗತಿಸಿದರು.