ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತನಿಖೆ

ಬೆಂಗಳೂರು, ಮೇ ೨೧- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.ಬೆಂಗಳೂರಿನಲ್ಲಿಂದು ಖಾಸಗಿ ವಾಹಿನಿಯ ಜತೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಬಳಿ ಹೇಳಿದ್ದಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾಸಗಿಯಾಗಿ ನನ್ನ ಜತೆ ಮಾತನಾಡುವ ಸಂದರ್ಭದಲ್ಲಿ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಅಕ್ರಮಗಳು ನಡೆದಿದೆಯೋ ಅದನ್ನೆಲ್ಲಾ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.ಈ ಹಗರಣಗಳಲ್ಲಿ ಅಧಿಕಾರಿಗಳು ಭಾಗಿಯಾಗಿರಲಿ, ಸಚಿವರು ಭಾಗಿಯಾಗಿರಲಿ ಯಾರೇ ಇರಲಿ, ಅವರನ್ನು ಶಿಕ್ಷೆಗೆ ಒಳಪಡಿಸುವ ಕೆಲಸ ಮಾಡುತ್ತೇವೆ. ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂಬುದು ಸಿದ್ದರಾಮಯ್ಯನವರ ಇಚ್ಛೆಯಾಗಿದೆ. ಇದನ್ನೆ ನನಗೆ ಅವರು ಹೇಳಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದರು.ನೀರಾವರಿ ಇಲಾಖೆ ಇರಲಿ, ಲೋಕೋಪಯೋಗಿ ಇಲಾಖೆ ಇರಲಿ, ಪಿಎಸ್‌ಐ ನೇಮಕಾತಿ ಹಗರಣ, ಗುತ್ತಿಗೆದಾರರ ಕಮೀಷನ್ ಪ್ರಕರಣ ಎಲ್ಲ ಅಕ್ರಮಗಳ ಬಗ್ಗೆಯೂ ತನಿಖೆಯಾಗುತ್ತದೆ ಎಂದು ಅವರು ತಿಳಿಸಿದರು.