ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ.ಜೂ.11:ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಮೇಲಿನ ಬೆಲೆ ಏರಿಕೆಯ ವಿರುದ್ಧ ಶುಕ್ರವಾರ ಉತ್ತರ ಮತ ಕ್ಷೇತ್ರದ ಶಹಾಬಜಾರ್ ಬ್ಲಾಕ್ ಅಧ್ಯಕ್ಷ ಅಶೋಕ್ ಹೆಚ್. ಕಪನೂರ್ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅವಿನಾಶ್ ಪೆಟ್ರೋಲ್ ಪಂಪ್ ಹತ್ತಿರ ಪ್ರತಿಭಟನೆ ಮಾಡಿದರು.

ಅಂತರರಾಷ್ಟೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಕಂಡರು ಸಹ, ಕೇಂದ್ರದ ಬಿಜೆಪಿ ಸರಕಾರವು ದೇಶದ ಜನರ ಮೇಲೆ ಪೆಟ್ರೋಲ್ ಮೇಲಿನ ತೆರಿಗೆ ಹೆಸರಲ್ಲಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಅಂದರೆ, 2014ರ ಏಪ್ರಿಲ್‍ನಲ್ಲಿ, ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 9.48 ರೂ.ಗಳು ಹಾಗೂ 3.56 ರೂ.ಗಳು ತೆರಿಗೆಯನ್ನು ಸರ್ಕಾರ ವಿಧಿಸಿತ್ತು. ಆದಾಗ್ಯೂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 307ರಷ್ಟು ಹೆಚ್ಚಿಸಿದೆ. ಈಗ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ನಿಂದ ಕ್ರಮವಾಗಿ 32.90 ರೂ.ಗಳು ಹಾಗೂ 31.80 ರೂ.ಗಳನ್ನು ಮೋದಿ ಸರ್ಕಾರವು ವಸೂಲಿ ಮಾಡುತ್ತಿದೆ ಎಂದು ಅವರು ಬಲವಾಗಿ ವಿರೋಧಿಸಿದರು.
ಪ್ರತಿಭಟನೆಯಲ್ಲಿ ಸೂರ್ಯಕಾಂತ್ ಗುಬ್ಬಿ, ಅನಿಲ್ ಭಂಕೂರ್, ರವಿ ಡೋಣಿ, ರಜನಿಕಾಂತ್ ನೇಳಕುಡ, ಜಗನ್ನಾಥ್ ಜಮಾದಾರ್, ಸದಾಶಿವ ಬೆಟ್ಟಜೇವರ್ಗಿ, ಗೌತಮ್ ಕರಿಕಲ್, ಅನಿಲ್ ದೇಕುನ್, ಅನಿಲ್ ನಂದನಕರ್, ಶೇಖರ್ ಗುಡೂರ್, ಶ್ರವಣ್ ಖಜನದಾರ್, ನಾಗರಾಜ್ ನೇಲೂರ್, ರಾಕೇಶ್ ಗುಬ್ಬಿ, ಸಿದ್ದು ಅಂಕಲಗಿ ಮುಂತಾದವರು ಪಾಲ್ಗೊಂಡಿದ್ದರು.