ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಅಪರಾಧ ಪ್ರಕರಣ: ವಾಲೆಚಂದ್ರಯ್ಯ

ಕೊರಟಗೆರೆ, ಮೇ ೨೫- ಬಿಜೆಪಿ ಸರ್ಕಾರದಲ್ಲಿದ್ದಂತಹ ದುಸ್ಥಿತಿ, ಕಾಂಗ್ರೆಸ್ ಸರ್ಕಾರದಲಿಲ್ಲ. ನ್ಯಾಷನಲ್ ಕ್ರೈಂ ಬ್ಯುರೋ ವರದಿಯಲ್ಲಿ ಬಿಜೆಪಿ ಆಡಳಿತದಲ್ಲಿ ಅತಿ ಹೆಚ್ಚು ಮಹಿಳಾ ದೌರ್ಜನ್ಯ ನಡೆದಿದೆ. ಇದರ ಬಗ್ಗೆ ಮೊದಲು ಬಿಜೆಪಿ ಎಚ್ಚೆತ್ತುಕೊಳ್ಳಲಿ ಎಂದು ರವಿಶಂಕರ್ ಹೆಬ್ಬಾಕ ವಿರುದ್ದ ನಗರಸಭಾ ಮಾಜಿ ಸದಸ್ಯ ವಾಲೆ ಚಂದ್ರಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಜನ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇದರ ನೇರ ಹೊಣೆ ಹೊತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜಿನಾಮೆ ನೀಡಬೇಕು ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವೊಂದು ಮಹಿಳಾ ದೌರ್ಜನ್ಯ ಕೇಸುಗಳನ್ನು ರವಿಶಂಕರ್ ಹೆಬ್ಬಾಕ ತಾಳೆ ಮಾಡಿ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗಿನಿಂದಲೂ ಕಾನೂನು ಸುವ್ಯವಸ್ಥೆ ತುಂಬಾ ವ್ಯವಸ್ಥಿತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅದನ್ನ ಸಹಿಸಿಕೊಳ್ಳಲಾಗದ ವಿರೋಧಪಕ್ಷವಾದ ಬಿಜೆಪಿಯ ಮುಖಂಡರು ಇಲ್ಲಸಲ್ಲದ ಅರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದ ವಹಿಸಿಕೊಂಡ ಸಂದರ್ಭದಲ್ಲಿ ನ್ಯಾಷನಲ್ ಕ್ರೈಂ ಬ್ಯುರೋ ವರದಿ ಪ್ರಕಾರ ಕಳೆದ ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದದ್ದು, ೧೭,೮೧೩ ಪ್ರಕರಣಗಳು ದಾಖಲಾಗಿವೆ. ಆದರ ಹಿಂದಿನ ವರ್ಷ ೨೦೨೧ ರಲ್ಲಿ ೧೪,೪೬೮ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂಬುದು ಈ ವರದಿಯಲ್ಲಿಯೇ ತಿಳಯುತ್ತದೆ ಎಂದರು.
ಶಾಸಕರಾಗಿದ್ದವರು, ಸಚಿವರಾಗಿದ್ದವರು ಮಾನ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಅವಾಂತರಗಳಿದ್ದರೂ ಸಹ ತುಮಕೂರಿನ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಹೇಳಿಕೆ ನಿಡುವುದು ಹಾಗೂ ಗೃಹ ಸಚಿವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದವಾಗಿದೆ ಎಂದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಣಿಪುರದಿಂದ ಗುಜರಾತ್‌ವರೆಗೆ, ಉತ್ತರಪ್ರದೇಶದಿಂದ ಮಧ್ಯಪ್ರದೇಶದವರೆಗೆ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನ್ಯಾಷನಲ್ ಕ್ರೈಂ ಬ್ಯುರೋ ವರದಿಗಳೇ ಹೇಳುತ್ತಿವೆ. ಹೀಗಿರುವಾಗ ಕಾಂಗ್ರೆಸ್ ಸರ್ಕಾರದ ಮೇಲೆ ಟೀಕೆ ಮಾಡುವುದು ಬಿಜೆಪಿ ನಾಯಕರುಗಳಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.