ಬಿಜೆಪಿ ಸರ್ಕಾರದಿಂದ ಮಾತ್ರ ಓಬಿಸಿ ಏಳಿಗೆ: ನರೇಂದ್ರ ಬಾಬು

ಬೀದರ:ಮಾ.19:ಕಣ್ಣು, ಕವಿ, ಬಾಯಿ ಇಲ್ಲದೆ ನಿಷ್ಪ್ರಯೋಜಕವಾಗಿದ್ದ ಹಿಂದುಳಿದ ವರ್ಗಗಳ ಕೇಂದ್ರದ ಆಯೋಗಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದ್ದಾರೆ. ಹಿಂದುಳಿದ ವರ್ಗಗಳ ಜನರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭವೃದ್ಧಿ ಸಾಧಿಸಲು ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬಿಜೆಪಿಯಿಂದ ಮಾತ್ರ ಹಿಂದುಳಿದ ವರ್ಗಗಳ ಏಳಿಗೆ ಸಾಧ್ಯ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರಾದ ನರೇಂದ್ರ ಬಾಬು ಅವರು ತಿಳಿಸಿದರು.

ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದಲ್ಲಿ ಮಾರ್ಚ್ 18ರಂದು ನಡೆದ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಬಂದ ನಂತರ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ. ರೈಲ್ವೇ ಉನ್ನತೀಕರಣಗೊಂಡಿದೆ. ಕೋವಿಡ್ ಸಂದರ್ಭದಲ್ಲಿ ವಿಶ್ವದಲ್ಲೇ ಮಾದರಿ ರೀತಿಯಲ್ಲಿ ಜನರನ್ನು ರಕ್ಷಿಸಲಾಗಿದೆ. ಗರೀಬ್ ಕಲ್ಯಾಣ ಯೋಜನೆ, ಆಯುಷ್‍ಮಾನ್ ಭಾರತ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಆರೋಗ್ಯ ಸೇವೆ ನೀಡಲಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಬೇಟಿ ಬಚಾವೊ, ಬೇಟಿ ಪಡಾವೋ ಕಾರ್ಯಕ್ರಮ ನೀಡಿದರು. ಬಸವರಾಜ ಬೊಮ್ಮಾಯಿಯವರು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದ್ದಾರೆ. ಹೆಣ್ಣು ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶುಲ್ಕರಹಿತವಾಗಿ ವಿದ್ಯಾಭ್ಯಾಸ ಮಾಡುವಂತಹ ವಾತಾವರಣ ನಿರ್ಮಿಸಿದ್ದಾರೆ.

ಪ್ರಧಾನಿಯವರು ಒಂದು ದಿನವೂ ರಜೆ ಪಡೆಯದೇ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಕ್ಷಣ ದೇಶದ ಅಭಿವೃದ್ಧಿ ಮತ್ತು ನಾಗರಿಕರ ರಕ್ಷಣೆಯ ಕುರಿತು ಚಿಂತಿಸುವ ಏಕೈಕ ಪ್ರಧಾನಿ ನರೇಂದ್ರ ಮೋದಿವಯರು ದೇಶಕ್ಕೆ ಸಿಕ್ಕಿದ್ದಾರೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಎಲ್ಲ ಸಮುದಾಯಗಳ ಅಭಿವೃದ್ಧಿ ಸಾಧಿಸಲು ನಾನಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.

ಹಿಂದುಳಿದ ವರ್ಗಗಳ ಸಮುದಾಯವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿಯನ್ನು ಕೇವಲ ಬಿಜೆಪಿ ಸರ್ಕಾರಕ್ಕೆ ಮಾತ್ರ ಹೊಂದಿದೆ. ಹಾಗಾಗಿ ರಾಜ್ಯದಲ್ಲಿಯೂ ಸ್ಥಿರ ಮತ್ತು ಸದೃಢ ಸರ್ಕಾರವನ್ನು ತರಲು ಕಾರ್ಯಕರ್ತರು ಸಂಕಲ್ಪ ತೊಡಬೇಕು. ಮುಂದಿನ ಚುನಾವಣೆಯಲ್ಲಿ ಔರಾದ್‍ನಲ್ಲಿ ಬಿಜೆಪಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ವಿಜಯ ಸಾಧಿಸಲು ಪಣ ತೊಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಹಾರಾಷ್ಟ್ರ ರಾಜ್ಯದ ನಿಲಂಗಾ ಶಾಸಕರಾದ ಸಂಭಾಜಿ ಪಾಟೀಲ್ ಅವರು ಮಾತನಾಡಿ, ಸಚಿವ ಪ್ರಭು ಚವ್ಹಾಣ ಅವರು ಸರಳ, ಸಜ್ಜನಿಕೆಯ ಮತ್ತು ಪ್ರಮಾಣಿಕ ವ್ಯಕ್ತಿ. ಸಚಿವ ಸ್ಥಾನಕ್ಕೇರಿದರೂ ನಗರ ಪ್ರದೇಶಗಳಲ್ಲಿ ಮನೆ ಮಾಡದೇ ತಮ್ಮ ಸ್ವಂತ ಊರಲ್ಲಿಯೇ ವಾಸಿಸುವ ಮೂಲಕ ಜನರ ಜೊತೆಯಲ್ಲಿದ್ದಾರೆ. ಸದಾ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಬಗ್ಗೆ ಚಿಂತಿಸುವ ಇವರನ್ನು ಪುನಃ ಪ್ರಚಂಡ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಮಾತನಾಡಿ, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಉದ್ದಿಮೆಗಳನ್ನು ತಂದು ಇಲ್ಲಿನ ಯುವಜನತೆಯ ಕೈಗೆ ಉದ್ಯೋಗಗಳನ್ನು ಕೊಡುವುದೇ ನನ್ನ ದೊಡ್ಡ ಕನಸಾಗಿದೆ. ಇದಕ್ಕೆ ಬೇಕಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಉದ್ದಿಮೆಗಳು ಬರಲು ರಾಷ್ಟ್ರೀಯ ಹೆದ್ದಾರಿಗಳು, ವಿದ್ಯುತ್ ಮತ್ತು ನೀರಿನ ಸೌಕರ್ಯದಂತಹ ನಾನಾ ಮೂಲಸೌಕರ್ಯಗಳು ಇರಬೇಕೆಂಬ ನಿಯಮವಿರುತ್ತದೆ. ಇಂತಹ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಔರಾದ ಮತ್ತು ಕಮಲನಗರ ತಾಲ್ಲೂಕಿನ ಯುವಕರು ಉದ್ಯೋಗಕ್ಕಾಗಿ ಮುಂಬೈ, ಪುಣೆ, ಬೆಂಗಳೂರಿನಂತಹ ಬೇರೆ ನಗರಗಳಿಗೆ ಹೋಗುವ ಅಗತ್ಯ ಇರುವುದಿಲ್ಲ. ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳು ಸಿಗುವ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.

ಔರಾದ ಕ್ಷೇತ್ರದ 4 ಲಕ್ಷ ಜನತೆಯೇ ನನ್ನ ಪಾಲಿನ ದೇವರಾಗಿದ್ದಾರೆ. 15 ವರ್ಷಗಳವರೆಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತಾ ಬಂದಿದ್ದೇನೆ. ರಸ್ತೆ, ಸೇತುವೆ, ಕುಡಿಯುವ ನೀರು ಪೂರೈಕೆ ಒಳಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದೇನೆ. ಇಲ್ಲಿವರೆಗೆ ಯಾರಿಗೂ ಮೋಸ, ವಂಚನೆ, ಅನ್ಯಾಯ ಮಾಡಿಲ್ಲ. ಕಷ್ಟವೆಂದು ಹೇಳಿಕೊಂಡು ಬಂದ ಪ್ರತಿಯೊಬ್ಬರಿಗು ನೆರವಾಗಲು ಪ್ರಯತ್ನಿಸಿದ್ದೇನೆ. ಹಾಗಾಗಿ ಜನ ಎಂದಿಗೂ ನನ್ನ ಕೈಬಿಡುವುದಿಲ್ಲ ಎಂದರು.

ಕೆಲವರು ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜನತಗೆ ನನ್ನ ಬಗ್ಗೆ ಸರಿಯಾಗಿ ಗೊತ್ತಿದೆ. ಸುಳ್ಳು ಹೇಳಿಕೆಗಳು, ಅಪಪ್ರಚಾರಗಳಿಗೆ ಕಿವಿಗೊಡುವುದಿಲ್ಲ. ಔರಾದ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರ ರಾಮರಾಜ್ಯದಂತೆ ಇರಲಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪರವಾಗಿರುವ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಪುನಃ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನೀಲ ಭೋಸಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸ್ವಿ, ಓಬಿಸಿ ರಾಜ್ಯ ಉಪಾಧ್ಯಕ್ಷ ಶರಣಪ್ಪ ತಳವಾರ, ಅಭಿಮನ್ಯು ನಿರಗುಡೆ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಡಿ.ಕೆ ಸಿದ್ರಾಮ್, ಶಿವರಾಜ ಗಂದಗೆ, ರಾಮಶೆಟ್ಟಿ ಪನ್ನಾಳೆ, ವಿಜಯಕುಮಾರ ಪಾಟೀಲ, ಅರಹಂತ ಸಾವಳೆ, ಸತೀಷ ಪಾಟೀಲ, ಕಿರಣ ಪಾಟೀಲ ಹಕ್ಯಾಳ, ವೀರಣ್ಣ ಕಾರಭಾರಿ, ದೊಂಡಿಬಾ ನರೋಟೆ, ರಮೇಶ ಉಪಾಸೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಅಮರ ಜಾಧವ, ರಂಗರಾವ ಜಾಧವ, ಜೈಪಾಲ ರೆಡ್ಡಿ, ಯೋಗೇಶ ಪಾಟೀಲ, ಸಂಜೀವ ಮುರ್ಕೆ, ರಾಜೇಂದ್ರ ಮಾಳಿ, ಶಂಕರ ರೆಡ್ಡಿ, ಡಾ.ಉಮೇಶ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.