ಬಿಜೆಪಿ ಸರ್ಕಾರದಿಂದ ಬ್ಯಾಡಗಿ ಕ್ಷೇತ್ರದ ಅಭಿವೃದ್ಧಿ: ಶಾಸಕ ಬಳ್ಳಾರಿ.


ಬ್ಯಾಡಗಿ,ಫೆ.26 ಯಾವುದೇ ನದಿ ಮೂಲಗಳನ್ನು ಹೊಂದಿರದ ಬ್ಯಾಡಗಿ ತಾಲೂಕು ಬೌಗೊಳಿಕವಾಗಿ 460 ಮೀಟರ್ ಎತ್ತರ ಪ್ರದೇಶದಲ್ಲಿದ್ದು, ಇಂತಹ ಪ್ರದೇಶಕ್ಕೆ ಏತ ನೀರಾವರಿ ಹಾಗೂ ಕುಡಿಯುವ ನೀರು ಪೂರೈಕೆಗಾಗಿ ತುಂಗಭದ್ರಾ ನದಿಯಿಂದ ನೀರು ತರಲು ಸರ್ಕಾರದಿಂದ ಕೋಟ್ಯಾಂತರ ರೂಗಳ ಅನುದಾನವನ್ನು ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸಿದ್ದಾಗಿ ಶಾಸಕ ವಿರೂಪಾಕ್ಷ ಬಳ್ಳಾರಿ ತಿಳಿಸಿದರು.
ತಾಲೂಕಿನ ಬನ್ನಿಹಟ್ಟಿ ಮತ್ತು ರಾಮಗೊಂಡನಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 3.20ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮನೆಮನೆಗೆ ಗಂಗೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬ್ಯಾಡಗಿ ತಾಲೂಕಿನ ಪಶ್ಚಿಮ ಭಾಗದಲ್ಲಿ ವರದಾ ನದಿ ಹಾಗೂ ಪೂರ್ವ ಭಾಗದಲ್ಲಿ ತುಂಗಭದ್ರಾ ನದಿ ಹರಿದಿದ್ದು, ಇವುಗಳ ಮೂಲಕ ಏತ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ತಾವು ಶಾಸಕರಾಗಿ ಆಯ್ಕೆಯಾಗಿ ಬಂದ ನಂತರ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದಿಂದ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಪಡೆಯಲು ಪರದಾಡುವಂತಾಗಿತ್ತು. ಆದರೆ ದೈವಾನುಗ್ರದಿಂದ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರ್ತು ಕ್ರಮ ವಹಿಸಿ 369 ಕೋಟಿ ರೂಗಳಲ್ಲಿ ಎರಡು ಕೆರೆ ತುಂಬಿಸುವ ಯೋಜನೆಗಳಿಗೆ ಮಂಜೂರಾತಿ ನೀಡಿದ್ದು, ಕೇವಲ ಎಂಟು ದಿನಗಳಲ್ಲಿ ಈ ಯೋಜನೆಗಳ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ಎಂದು ಸ್ಮರಿಸಿದರು.
ಪಿಕಾರ್ಡ್ ಬ್ಯಾಂಕ್ ರಾಜ್ಯ ಸದಸ್ಯ ಸುರೇಶ ಯತ್ನಳ್ಳಿ ಮಾತನಾಡಿ, ಜನರಿಂದ ಮತ ಪಡೆಯುವಂತ ಕೆಲಸ ಸುಲಭದ ಮಾತಲ್ಲ. ಆದರೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ತಮ್ಮ ಸತತ ಪ್ರಯತ್ನದಿಂದ ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಳಿಸಿ ಆಯ್ಕೆಯಾಗಿದ್ದು, ಈವರೆಗೂ ಮತದಾರರು ನೀಡಿದ ಅಧಿಕಾರವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಉಪಯೋಗಿಸುವ ಮೂಲಕ ತಮ್ಮ ಮೇಲೆ ಮತದಾರರು ಇಟ್ಟಿರುವ ನಂಬಿಕ, ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರಲ್ಲದೇ, ಜೆಜೆಎಂ ಮೂಲಕ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ತಲುಪಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ ಎಂದರು.
ಎಇಇ ಸುರೇಶ ಬೇಡರ ಪ್ರಾಸ್ತಾವಿಕವಾಗಿ ಮಾತನಾಡಿ, ಬನ್ನಿಹಟ್ಟಿ ಗ್ರಾಮದಲ್ಲಿ 2.20ಕೋಟಿ ಹಾಗೂ ರಾಮಗೊಂಡನಹಳ್ಳಿ ಗ್ರಾಮದಲ್ಲಿ 1ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಜೆಜೆಎಂ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜಗದೀಶ ಕೆರಕರ, ಉಪಾಧ್ಯಕ್ಷೆ ಬಸವಣ್ಣೆಮ್ಮ ಕೆಂಚನಗೌಡ್ರ, ಸದಸ್ಯರಾದ ಸುಶೀಲಮ್ಮ ಬನ್ನಿಹಟ್ಟಿ, ವೀರೇಶ ಅಂಗಡಿ, ಶರಣಬಸವ ಚಿಕ್ಕಣಜಿ, ಮಖಂಡರಾದ ಚನಬಸಪ್ಪ ಬೂದಿಹಾಳ, ಶೇಖರಗೌಡ ಗೌಡ್ರ, ಹನುಮಂತಪ್ಪ ಹಿರೇಅಣಜಿ, ಬಸವರಾಜ ಮುದಿಗೌಡ್ರ, ನಿಂಗಪ್ಪ ದೇವಗಿರಿ, ಗ್ರಾಪಂ ಕಾರ್ಯದರ್ಶಿ ಪರಶುರಾಮ ಚೌಟಗಿ, ಗುತ್ತಿಗೆದಾರರಾದ ತಿಮ್ಮಣ್ಣ ವಡ್ಡರ, ಚಂದ್ರಕಾಂತ ಜಡಿಯಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.