ಬಿಜೆಪಿ ಸರ್ಕಾರದಲ್ಲಿ ಲಂಚ ಇಲ್ಲದಿದ್ದರೆ ಕೆಲಸವಾಗಲ್ಲ

ಅಫಜಲಪುರ: ಡಿ.6:ಕಲಬುರಗಿ ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ದಂಧೆಕೋರರಿಗೆ ನರೇಂದ್ರ ಮೋದಿಯವರ ಬಿಜೆಪಿ ಪಕ್ಷ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದೆ ಆದರೆ ಕಾಂಗ್ರೆಸ್ ಪಕ್ಷ ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಲು ಪಣತೊಟ್ಟಿದೆ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಬಿಜೆಪಿ ವಿರುದ್ಧ ಹರಿಹಾಯ್ದರು. ಪಟ್ಟಣದ ನ್ಯಾಷನಲ್ ಫಂಕ್ಷನಲ್ಲಿ ರವಿವಾರದಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಫಜಲಪುರ ಹಾಗೂ ಫರತಹಬಾದ ವತಿಯಿಂದ ಆಯೋಜಿಸಿದ್ದ ಕಲಬುರಗಿ, ಯಾದಗಿರಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಆರು ವರ್ಷಗಳ ಅವಧಿಯಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಒಂದು ಬಾರಿಯೂ ವಿಧಾನಪರಿಷತ್ತಿನಲ್ಲಿ ಮಾತನಾಡದೆ ಸಂಪೂರ್ಣ ಅವಧಿಯನ್ನು ಮೋಜುಮಸ್ತಿಯಲ್ಲಿ ಹಾಗೂ ತಮ್ಮ ವೈಯಕ್ತಿಕ ವ್ಯಾಪಾರಕ್ಕಾಗಿ ಬಳಸಿಕೊಂಡಿದ್ದಾರೆ. ಅವರಿಗೆ ನಿಮ್ಮ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ಬಿಜೆಪಿ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಹಣ ಹಂಚಿ ಗೆದ್ದ ನಂತರ ಇಡೀ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಇದು ಕಳ್ಳರ ಪಕ್ಷವಾಗಿದೆ. ಹಣಕೊಟ್ಟು ಮತದಾರರಿಗೆ ಮೋಸ ಮಾಡಿ ಮತವನ್ನು ಖರೀದಿ ಮಾಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇವರಿಗೆ ಮಾನ ಮರ್ಯಾದೆ ಯಾವುದು ಇಲ್ಲ ಇವರೆಲ್ಲರೂ ಲೂಟಿಕೋರರು ಇವರಿಗೆ ಯಾವುದೇ ಕಾರಣಕ್ಕೂ ನಿಮ್ಮ ಅಮೂಲ್ಯವಾದ ಮತವನ್ನು ನೀಡಬಾರದು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಚುನಾವಣೆ ಅಲ್ಲ ಇದು ಬಡವ-ಶ್ರೀಮಂತ ನಡುವಿನ ಚುನಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವಕಿಂತ ಮುಂಚೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಬಂಡವಾಳಶಾಹಿಗಳ 6 ಲಕ್ಷ ಕೋಟಿ ರೂ. ಹಣವನ್ನು ಮನ್ನಾ ಮಾಡಿದ್ದಾರೆ.2016ರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭೀಮಾ ಫಸಲ್ ಯೋಜನೆ ಅಡಿಯಲ್ಲಿ 220 ಕೋಟಿ ರೂ. ಇನ್ಸೂರೆನ್ಸ್ ಕಂಪನಿಯವರು ರೈತರಿಂದ ತೆಗೆದುಕೊಂಡಿದ್ದಾರೆ ಆದರೆ ಮರಳಿ ರೈತರಿಗೆ ಕೇವಲ 16 ಕೋಟಿ ಮಾತ್ರ ನೀಡಿ ಉಳಿದ ಹಣವನ್ನು ಬಂಡವಾಳಶಾಹಿಗಳು ದೋಚಿಕೊಂಡು ಹೋಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 40% ರಷ್ಟು ಪಸೆರ್ಂಟೇಜ್ ನೀಡದಿದ್ದರೆ ಯಾವುದೇ ರೀತಿಯ ಸರ್ಕಾರದ ಕೆಲಸಗಳು ಆಗುತ್ತಿಲ್ಲ ನೇರವಾಗಿ ಸರ್ಕಾರ ಇದಕ್ಕೆ ಪೆÇ್ರೀತ್ಸಾಹ ನೀಡುತ್ತಿದೆ.ಇದಕ್ಕೆ ಪೂರಕವಾಗಿ ಗುತ್ತಿಗೆದಾರರ ಸಂಘಟನೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಟ್ಕಾ ದಂಧೆ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಲವಾರು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೆ ಅದು ಮತ್ತೆ ಈಗ ಎಗ್ಗಿಲ್ಲದೆ ನಡೆಯುತ್ತಿದೆ ಹೀಗಾಗಿ ಈ ಬಾರಿ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಶಿವಾನಂದ ಪಾಟೀಲ್ ಅವರಿಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಂ.ವೈ.ಪಾಟೀಲ್ ಮಾತನಾಡಿ 6 ವರ್ಷಗಳ ಹಿಂದೆ ಬಿ.ಜಿ.ಪಾಟೀಲ್ ಅವರನ್ನು ಗೆಲ್ಲಿಸಿ ನಾವು ಇವತ್ತಿಗೂ ಸಹ ಪಶ್ಚಾತಾಪ ಪಡುತ್ತಿದ್ದೇವೆ. ನಾನು ಸಹ ಹಲವಾರು ಬಾರಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿ ಎಂದು ಪತ್ರ ಬರೆದಿದ್ದೆ ಆದರೆ ಬಾರಿಯೂ ನಯಾಪೈಸೆ ಅನುದಾನ ನೀಡಿಲ್ಲ. ಮತದಾರರನ್ನು ಖರೀದಿ ಮಾಡಲು ಬಿಜೆಪಿ ಅಭ್ಯರ್ಥಿ ಹೊರಟಿದ್ದಾರೆ. ಇದು ಅವರ ಮೂರ್ಖತನವಾಗಿದೆ. ದುಡ್ಡು ಇದ್ದರೆ ಎಲ್ಲವೂ ಸಾಧ್ಯ ಎಂಬುದು ಅವರು ತಿಳಿದುಕೊಂಡಿದ್ದಾರೆ.ಆದರೆ ಅದಕ್ಕಿಂತ ಮುಖ್ಯವಾಗಿರುವುದು ಮತದಾನ ಎಂಬುದನ್ನು ಮರೆತು ಜನಸಾಮಾನ್ಯರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ. ಸರ್ಕಾರದ ಚೆಕ್ ಮೇಲೆ ಪ್ರಧಾನಮಂತ್ರಿ, ರಾಷ್ಟ್ರಪತಿಗಳಿಗೂ ಸಹಿ ಮಾಡುವ ಅಧಿಕಾರ ಇಲ್ಲ ಆದರೆ ಗ್ರಾಪಂ ಅಧ್ಯಕ್ಷರಿಗೆ ಚೆಕ್ ಮೇಲೆ ಸಹಿ ಮಾಡುವ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಬಿಜೆಪಿ ಅಭ್ಯರ್ಥಿ ಹಣ ಹಂಚಿ ಗೆಲ್ಲಬಹುದು ಎಂದು ಬೀಗುತ್ತಿದ್ದಾರೆ ಆದರೆ ಕಾಂಗ್ರೆಸ್ ಅಭ್ಯರ್ಥಿ ಹತ್ತಿರ ಯಾವುದೇ ರೀತಿಯ ಹಣ ಇಲ್ಲ ಇವರ ಹತ್ತಿರ ಇರೋದು ಒಳ್ಳೆಯ ಗುಣ ಹಾಗೂ ಜನಸೇವೆ ಮಾಡುವ ಒಳ್ಳೆಯ ಮನಸ್ಸು ಇದೆ ಹೀಗಾಗಿ ಅವರನ್ನು ಹೆಚ್ಚಿನ ಮತ ಹಾಕುವ ಮೂಲಕ ಗೆಲ್ಲಿಸಬೇಕು. ಈ ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ತನ್ನದೆಯಾದ ಕೊಡುಗೆ ನೀಡಿದೆ. ಈ ದೇಶಕ್ಕಾಗಿ ರಾಜೀವ್ ಗಾಂಧಿ, ಇಂದಿರಾಗಾಂಧಿ ಸೇರಿ ಹಲವು ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಧಾನಿ ಅವರು ಹೊರದೇಶಗಳಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದು 7 ವರ್ಷ ಕಳೆದರೂ ಇಂದಿಗೂ ಯಾರೊಬ್ಬರಿಗೂ ನಯಾ ಪೈಸೆ ಖಾತೆಗೆ ಬಂದಿಲ್ಲ. ಬಿಜೆಪಿಯವರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.ಒಂದು ವೇಳೆ ಸಂವಿಧಾನ ಬದಲಾವಣೆಗೆ ಮುಂದಾದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಮಾತನಾಡಿ 6 ವರ್ಷ ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಅವರು ಯಾವುದೇ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ತಾಲೂಕ್ ಪಂಚಾಯತ್ ಗಳಿಗೆ ಒಂದು ದಿನವೂ ಸಹ ಭೇಟಿ ನೀಡದೆ ಸಂಪೂರ್ಣ ಆರು ವರ್ಷ ಅವಧಿಯಲ್ಲಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನಿರತರಾಗಿದ್ದರು. ಬಿಜೆಪಿ ಪಕ್ಷವು ಹಣದ ಆಧಾರದ ಮೇಲೆ ಬಿ.ಜಿ.ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ 13 ಮತಕ್ಷೇತ್ರದಲ್ಲಿ ನಮ್ಮ ಪಕ್ಷದ ನಾಯಕರು ಪ್ರಚಾರ ಮಾಡುತ್ತಿದ್ದಾರೆ ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನನಗೊಂದು ಅವಕಾಶ ಮಾಡಿಕೊಡಿ ಎಂದು ಮತದಾರರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಹಿರಿಯ ಮುಖಂಡ ಮುಕ್ಬೂಲ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಗುಂಡಪ್ಪ ಹೊಸ್ಮನಿ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್,ದಿಲೀಪ್ ಪಾಟೀಲ್, ಪ್ರಕಾಶ್ ಜಮಾದಾರ, ಸಿದ್ದಾರ್ಥ ಬಸರಿಗಿಡ,ಪಪ್ಪು ಪಟೇಲ್, ಬಾಬಾಸಾಹೇಬ ಪಾಟೀಲ್,ಮಹಾದೇವಗೌಡ ಕರೂಟಿ,ಸುರೇಶ ತಿಬಶೇಟ್ಟಿ,ರಾಜೇಂದ್ರಗೌಡ ಪಾಟೀಲ್,ಸಿದ್ದು ಸಿರಸಗಿ,ತುಕರಾಮಗೌಡ ಪಾಟೀಲ್, ನೀಲಕಂಠರಾವ್ ಮುಲಗೆ, ಶಿವಶರಣಪ್ಪ ಪಾಟೀಲ್, ಶರಣು ಕುಂಬಾರ,ರವಿ ಶೆಟ್ಟಿ,ಮಲ್ಲಯ್ಯ ಹೊಸಮಠ, ರೇಣುಕಾ ಸಿಂಗೆ, ಜ್ಞಾನೇಶ್ವರಿ ಪಾಟೀಲ್ ಸೇರಿದಂತೆ ಇತರರು ಇದ್ದರು.

ವಿಧಾನಸಭೆಯಲ್ಲಿ ಕುಳಿತು ಕಾಮಗಾರಿಯ ಪಸೆರ್ಂಟೇಜ್ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷಕ್ಕೆ ಮತ ಹಾಕದೆ. ಜನಸಾಮಾನ್ಯರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಗೆಲ್ಲಿಸಬೇಕು.ನಮ್ಮ ಜೆ.ಎಂ.ಕೊರಬು ಫೌಂಡೇಶನ್ ಬೆಂಬಲಿತ ಎಲ್ಲಾ ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಮತಚಲಾವಣೆ ಮಾಡಲಿದ್ದಾರೆ.
-ಜೆ.ಎಂ.ಕೊರಬು ಸಮಾಜ ಸೇವಕರು


ಬಿಜೆಪಿ ಪಕ್ಷವು ಕೇವಲ ಶ್ರೀಮಂತರ ಪಕ್ಷವಾಗಿದೆ. ಬಂಡವಾಳಶಾಹಿಗಳ ಬಿಜೆಪಿ ಪಕ್ಷಕ್ಕೆ ಮತ ಹಾಕದೆ ಬಡಜನರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು.
-ತಿಪ್ಪಣ್ಣಪ್ಪ ಕಮಕನೂರ ಮಾಜಿ ವಿಧಾನಪರಿಷತ್ ಸದಸ್ಯರು