ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ಸೊಗಡು ತೀರ್ಮಾನ

ತುಮಕೂರು, ಏ. 12- ಬಿಜೆಪಿಯ ಕಟ್ಟಾಳು ನಾಲ್ಕು ಬಾರಿ ಶಾಸಕರಾಗಿ ತುಮಕೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.

ತುಮಕೂರು ನಗರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣನವರ ಆಸೆಯನ್ನು ಪಕ್ಷದ ಹೈಕಮಾಂಡ್ ಭಗ್ನಗೊಳಿಸಿದ್ದು, ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಶಿವಣ್ಣನವರು ಇಂದು ಮಧ್ಯಾಹ್ನ ಬೆಂಬಲಿಗರು, ಹಿತೈಷಿಗಳು ಹಾಗೂ ಮೂಲ ಬಿಜೆಪಿಗರ ಸಭೆ ನಡೆಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡಿದ್ದಾರೆ.

ಬಿಜೆಪಿ ಟಿಕೆಟ್ ವಂಚಿತ ಶಿವಣ್ಣನವರ ಬೆಂಬಲಿಗರು ಸಹ ಪಕ್ಷದ ವಿವಿಧ ಘಟಕಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರುಗಳು ಸಹ ಸಾಮೂಹಿಕ ರಾಜೀನಾಮೆ ನೀಡುವ ತೀರ್ಮಾನವನ್ನು ಸಭೆಯಲ್ಲಿ ಪ್ರಕಟಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣನವರು, ನನ್ನ ರಾಜೀನಾಮೆಯನ್ನು ಪಕ್ಷದ ಹಿರಿಯ ನಾಯಕರಿಗೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನನಗೆ ಯಾವುದೇ ಹೈಕಮಾಂಡ್ ಇಲ್ಲ. ಕ್ಷೇತ್ರದ ಎರಡು ಲಕ್ಷ ಮತದಾರರೇ ನನ್ನ ಹೈಕಮಾಂಡ್. ಹಾಗಾಗಿ ನನ್ನ ಮತದಾರರು ಹೇಗೆ ಹೇಳುತ್ತಾರೋ ಹಾಗೆ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದರು.

ನನ್ನ ಪಕ್ಷ ನನ್ನ ಕೈ ಹಿಡಿಯುತ್ತದೆ ಎಂದು ಭಾವಿಸಿದ್ದೆ. ಆದರೆ ಕೈ ಬಿಟ್ಟಿದೆ, ಮನೆಯಲ್ಲಿರುವ ಪಕ್ಷದ ಭಾವುಟಗಳನ್ನು ಬೇರೆ ಕಡೆ ಸಾಗಿಸಿ, ರಾಜೀನಾಮೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ಕಟ್ಟಿದವರು ಇಂದು ಬಿಜೆಪಿ ಅರಮನೆಯಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಿಸಿದವರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೇವೆ. ಪಕ್ಷಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಮುಂದಿನದು ಜನರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಅವರೆಕಾಯಿ ಮಾರುತ್ತಿದ್ದ ನನ್ನನ್ನು ಶಾಸಕನಾಗಿ, ಸಚಿವರನ್ನಾಗಿ ಮಾಡಿದ್ದೀರಿ. ಜನರನ್ನು ಬಿಟ್ಟರೆ ನನಗೆ ಬೇರೆ ಯಾರು ಇಲ್ಲ. ಕಾರ್ಯಕರ್ತರು ಬೆಂಬಲಿಗರು ಹೇಳಿದಂತೆ ಚುನಾವಣೆಗೆ ಸ್ಪರ್ಧಿಸುವುದು ಸತ್ಯ ಎಂದರು.
ನಾನು ಕಬ್ಬಡಿ ಆಟಗಾರ ಎಲ್ಲವನ್ನು ಸ್ಫೂರ್ತಿಯಿಂದ ತೆಗೆದುಕೊಳ್ಳುತ್ತೇನೆ. ಆಟದ ಕೆಚ್ಚನ್ನು ಬಿಟ್ಟಿಲ್ಲ, ತೊಡೆ ತಟ್ಟುವುದನ್ನು ಮರೆತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.