ಬಿಜೆಪಿ ಸಂಧಾನ ಸಭೆಯಲ್ಲಿ ಸ್ಫೋಟ ಅಸಮಾಧಾನ ಪರಸ್ಪರ ತಳ್ಳಾಟ : ಬಿಜೆಪಿ ಜಿಲ್ಲಾಧ್ಯಕ್ಷ ವಿರುದ್ಧ ಆಕ್ರೋಶ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.15: ಬಿಜೆಪಿ ಟಿಕೆಟ್ ಹಂಚಿಕೆಯಿಂದ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಭುಗಿಲೆದ್ದಿರುವ ಅಸಮಾಧಾನ ಶಮನಕ್ಕೆ ಶುಕ್ರವಾರ ಸಂಜೆ ನಗರದಲ್ಲಿ ಕರೆದಿದ್ದ ಸಂಧಾನಸಭೆಯಲ್ಲಿ ಸಚಿವ ಆನಂದ ಸಿಂಗ್ ಸಮ್ಮುಖದಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವಗೌಡ ಪಾಟೀಲರನ್ನು ತರಾಟೆಗೆ ತೆಗೆದುಕೊಂಡು, ಕೆಲವರು ಪರಸ್ಪರ ತಳ್ಳಾಟ ಹಾಗೂ ಅಸಮಾಧಾನವನ್ನು ಹೊರಹಾಕಿದ ಘಟನೆ ಜರುಗಿದೆ.
ಜಿಲ್ಲೆಯ ಕೂಡ್ಲಿಗಿ ಮತ್ತು ಹೂವಿನಹಡಗಲಿ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಮೂಲ ಬಿಜೆಪಿಗರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಅಸಮಾಧಾನ ಬುಗಿಲೆದಿದ್ದಿರುವ ಹಿನ್ನೆಲೆಯಲ್ಲಿ ನಗರದ ಹೋಟೆಲ್‍ವೊಂದರಲ್ಲಿ ಅತೃಪ್ತರ ಸಭೆ ಕರೆಯಲಾಗಿತ್ತು.
ಹೂವಿನಹಡಗಲಿಯಲ್ಲಿ ಮಾಜಿ ಶಾಸಕ ಚಂದ್ರಾನಾಯ್ಕ, ಓದೋ ಗಂಗಪ್ಪ, ಹನುಮಂತಪ್ಪ ಮತ್ತಿತರರು ಬಿಜೆಪಿ ಸ್ಪರ್ಧಾಕಾಂಕ್ಷಿಗಳಾಗಿದ್ದರು. ದಶಕಗಳಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಬೇರು ಮಟ್ಟದಿಂದ ಪಟ್ಟ ಕಟ್ಟಿದ್ದಾರೆ. ಆದರೂ, ಕಾಂಗ್ರೆಸ್ ಆಕಾಂಕ್ಷಿಯನ್ನು ಪಕ್ಷಕ್ಕೆ ಕರೆತಂದು, ಟಿಕೇಟ್ ನೀಡಿರುವುದು ಸರಿಯಲ್ಲ. ಇದು ಬಿಜೆಪಿ ಮೂಲ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತೆ. ತಕ್ಷಣವೇ ಅಭ್ಯರ್ಥಿಯನ್ನು ಬದಲಾಯಿಸಬೇಕು ಎಂದು ಅನೇಕ ಬೆಂಬಲಿಗರು ಸಭೆಯಲ್ಲಿ ಆಗ್ರಹಿಸಿದರು.
ಸಭೆ ಬಳಿಕವೂ ಸಮಾಧಾನಗೊಳ್ಳದ ಬೆಂಗಲಿಗರು, ಪಕ್ಷದ ನಾಯಕರ ನಡೆಯನ್ನು ವಿರೋಧಿಸಿ ಹರಿಹಾಯ್ದರು. `ರಕ್ತ ಕೊಡುತ್ತೇವೆ, ಟಿಕೆಟ್ ಪಡೆದೇ ತೀರುತ್ತೇವೆ’ ಎಂದು ಘೋಷಣೆ ಕೂಗಿದರು. ಈ ವೇಳೆ ಪಕ್ಷದ ನಾಯಕರು ಮತ್ತು ಟಿಕೇಟ್ ಆಕಾಂಕ್ಷಿಗಳ ಬೆಂಬಲಿಗರು ಏರು ಧ್ವಿನಿಯಲ್ಲಿ ಮಾತಿನ ಚಕಮಕಿ ನಡೆಸಿದರು. ಅಲ್ಲದೇ, ಸಚಿವ ಆನಂದ ಸಿಂಗ್ ಸಮ್ಮುಖದಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವಗೌಡ ಪಾಟೀಲ ಅವರನ್ನು ತಳ್ಳಾಡಿದರು ಎಂದು ತಿಳಿದು ಬಂದಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಆನಂದ ಸಿಂಗ್ ಎಲ್ಲರನ್ನೂ ಸಮಾಧಾನ ಪಡಿಸಿ, ವಿವಾದಕ್ಕೆ ತೆರೆ ಎಳೆದರು ಎನ್ನಲಾಗಿದ್ದು ಅಸಮಾಧನ ಸರಿಪಡಿಸುವುದೆ ಒಂದು ಸಾಹಸವಾಯಿತು ಎನ್ನಲಾಗುತ್ತಿದೆ. ಯಾವರೀತಿಯ ತಿರುವು ಪಡೆಯುವುದೊ ಕಾದುನೋಡಬೇಕು.

One attachment • Scanned by Gmail