ಬಿಜೆಪಿ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ: ಜಿಲ್ಲಾಧ್ಯಕ್ಷ ಕೂಚಬಾಳ

ವಿಜಯಪುರ,ಜ.18:ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಮತ್ತೊಮ್ಮೆ ನನಗೆ ಒಲಿದು ಬಂದಿದೆ. ಹಿರಿಯರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪುನರಾಯ್ಕೆಯಾಗಿರುವುದು ನನ್ನ ಸುದೈವ ಎಂದರು.

ಬಿಜೆಪಿಯಲ್ಲಿ ಯಾವ ಬಣ ರಾಜಕಾರಣವೂ ಇಲ್ಲ. ಎಲ್ಲ ನಾಯಕರು ನನ್ನ ಆಯ್ಕೆಗೆ ಸಹಕರಿಸಿ ಈ ಜವಾಬ್ದಾರಿಯನ್ನು ಹೊರೆಸಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿವೆ. ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಮನೆ ಮಾತಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿದೆ, ಈ ನಿಟ್ಟಿನಲ್ಲಿ ನಮ್ಮ ಧ್ಯೇಯ, ಗುರಿ ಇದೆ. ಈ ಬಾರಿಯೂ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.

ಎಲ್ಲ ಕಾರ್ಯಕರ್ತರ, ಮುಖಂಡರ ಮಾರ್ಗದರ್ಶನ, ಸಲಹೆ ಸೂಚನೆ ಪಡೆದುಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದವರು ನುಡಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ವಿಜಯ ಜೋಶಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.